

ಬೆಂಗಳೂರು ಗ್ರಾಮಾಂತರ: ಕರೊನಾ 2ನೇ ಅಲೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ತಾಲೂಕುಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಸೇರಿ ಗ್ರಾಪಂ ಹಂತದಲ್ಲಿಯೂ ಅಧಿಕಾರಿಗಳ ತಂಡ ರಚಿಸಿ, ಕರೊನಾ ನಿಯಂತ್ರಣಕ್ಕೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಕಂದಾಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ದೇವನಹಳ್ಳಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮದುವೆ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ನಿಯಂತ್ರಿಸಬೇಕು. ಮಾರ್ಗಸೂಚಿ ಪಾಲಿಸದ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ 6 ತಿಂಗಳು ಕಲ್ಯಾಣ ಮಂಟಪ ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿ, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಮೀಸಲಿರಿಸುವಂತೆ ನೋಡಿಕೊಳ್ಳಬೇಕು. 1 ರಿಂದ 9ನೇ ತರಗತಿಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸಲು ಆರ್.ಅಶೋಕ್ ಸೂಚನೆ ನೀಡಿದರು.
ಹೆಚ್ಚಿನ ಅನುದಾನ ಭರವಸೆ: ಬೇಸಿಗೆ ಆರಂಭವಾಗಿದ್ದು, ಪ್ರಸ್ತುತ ಮೂರು ತಿಂಗಳ ಅವಧಿಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಅಗತ್ಯವಿರುವೆಡೆ ಖಾಸಗಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದರಲ್ಲದೆ, ಶೀಘ್ರವೇ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಶೋಕ್ ತಿಳಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನಗರಸಭೆಯಿಂದ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಮಾಡಬೇಕು ಎಂದರು.
ತಪ್ಪಿದರೆ ಶಿಸ್ತು ಕ್ರಮ: ಎಂಟಿಬಿ ಎಚ್ಚರಿಕೆ: ಅತಿವೃಷ್ಟಿ ಹಾಗೂ ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಣೆ ಕಷ್ಟಸಾಧ್ಯವಾಗಿದೆ. ಕುಡಿಯುವ ನೀರಿಗೆ ಜಿಲ್ಲೆಗಳು ಕೇಳಿದಷ್ಟು ಅನುದಾನ ನೀಡಲಾಗುತ್ತಿಲ್ಲ ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಅದರೊಂದಿಗೆ ಬೀದಿ ದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡುವುದು ಮುಖ್ಯವಾಗಿದೆ ಎಂದರು.
ಪುರಸಭೆ ಹಾಗೂ ನಗರಸಭೆಗಳು ತೆರಿಗೆ ಸಂಗ್ರಹಿಸುವ ಮೂಲಕ ಜಿಲ್ಲೆಯ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ತರಬೇಕು ಹಾಗೂ ತೆರಿಗೆ ವಂಚನೆ ಆಗದಂತೆ, ಅಕ್ರಮ ಖಾತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ನಗರಸಭೆ ಹಾಗೂ ಪುರಸಭೆಗಳ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಹಾಗೂ ಅಗತ್ಯವಿದ್ದರೆ ಖಾಸಗಿ ಕೊಳವೆ ಬಾವಿಗಳ ಸಹಾಯದಿಂದ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.