

ಧಾರವಾಡ: ಜನರನ್ನು ಕಾಡುತ್ತಿರುವ ಕರೊನಾ ಸೋಂಕು ತಡೆಯುವಲ್ಲಿ ದೇಶ ಮತ್ತು ಕರ್ನಾಟಕ ರಾಜ್ಯ ಯಶಸ್ವಿ ಕ್ರಮಗಳನ್ನು ಕೈಗೊಂಡಿವೆ. 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜಗತ್ತಿನಲ್ಲೇ ಬೃಹತ್ ಪ್ರಮಾಣದ ಲಸಿಕಾಕರಣ ನಡೆಯುತ್ತಿದೆ. ಮೊದಲ ಮತ್ತು 2ನೇ ಅಲೆಯಲ್ಲಿ ಸೋಂಕಿನಿಂದ ಮೃತರಾದ ಜಿಲ್ಲೆಯ 462 ಬಡ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ರಾಜ್ಯ ಸರ್ಕಾರದಿಂದ ತಲಾ 1 ಲಕ್ಷ ರೂ.ದಂತೆ ಒಟ್ಟು 4.62 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.
ನಗರದ ಆರ್ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಬುಧವಾರ ಏರ್ಪಡಿಸಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಸಿಕಾಕರಣ ಕಾರ್ಯ ಉತ್ತಮವಾಗಿ ಸಾಗಿದೆ. ಈವರೆಗೆ 15.50 ಲಕ್ಷ ಜನರಿಗೆ ಮೊದಲ ಡೋಸ್, 12 ಲಕ್ಷ ಜನರಿಗೆ 2ನೇ ಡೋಸ್ ಹಾಗೂ 10 ಸಾವಿರ ಜನರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. 15 ರಿಂದ 18 ವರ್ಷದೊಳಗಿನ ವಯೋಮಾನದ 73 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯ ಪ್ರತಿಯೊಬ್ಬರೂ ಲಸಿಕೆ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೋಂಕು ಬಾರದಂತೆ ಎಚ್ಚರವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ 10 ಎಕರೆ ಪ್ರದೇಶದಲ್ಲಿ ಶಾಲೆ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡು 36 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ 1.5 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಬಂದಿದೆ. ಕಾಮಗಾರಿ ಶೀಘ್ರವಾಗಿ ಆರಂಭವಾಗಲಿದೆ ಎಂದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್ಸ್ಪೆಕ್ಟರ್ ಬಿ.ಆರ್. ಚನ್ನಮ್ಮನವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಗೃಹರಕ್ಷಕ ದಳ, ಅಬಕಾರಿ, ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆಗಳ ತಂಡಗಳು ಭಾಗವಹಿಸಿದ್ದವು.
ಶಾಸಕ ಅಮೃತ ದೇಸಾಯಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಪಂ ಸಿಇಒ ಡಾ. ಬಿ. ಸುಶೀಲಾ, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಇತರರು ಇದ್ದರು.
ಸವೋತ್ತಮ ಸೇವಾ ಪ್ರಶಸ್ತಿ, ಸಾಧಕರಿಗೆ ಸನ್ಮಾನ
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 10 ಜನ ರಾಜ್ಯಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ 2020-21ನೇ ಸಾಲಿನ ಜಿಲ್ಲಾ ಮಟ್ಟದ ನೌಕರರ ಸವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ. ಎನ್.ಆರ್. ಪುರುಷೋತ್ತಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಸುಜಾತಾ ಹಸವಿಮಠ, ಡಾ. ಎಸ್.ಎಂ. ಹೊನಕೇರಿ, ಕಿಮ್ಸ್ನ ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ರಾಜಶೇಖರ ದ್ಯಾಬೇರಿ, ಡಾ. ಈಶ್ವರ ಹಸಬಿ, ಡಿಮ್ಹಾನ್ಸ್ ಡಾ .ರಾಘವೇಂದ್ರ ನಾಯಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಅನ್ನಪೂರ್ಣ ಸಂಗಳದ, ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡ್ರ, ವಾರ್ತಾ ಸಹಾಯಕ ಡಾ. ಸುರೇಶ ಹಿರೇಮಠ ಅವರಿಗೆ ಪ್ರಶಸ್ತಿ ನೀಡಲಾಯಿತು. ಪೊಲೀಸ್ ಕಾನ್ಸ್ಟೆಬಲ್ ಉಮೇಶ ಬಂಗಾರಿ, ಮಂಜುನಾಥ ಹಾಲವರ, ವೈದ್ಯಕೀಯ ಕ್ಷೇತ್ರದ ಡಾ. ಸತೀಶ ಇರಕಲ್, ರಾಷ್ಟ್ರ ಮಟ್ಟದ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಜಿ. ಸೃಷ್ಟಿ ಸುರೇಶ, ಅಂತಾರಾಷ್ಟ್ರೀಯ ಯೋಗ ಉತ್ಸವದಲ್ಲಿ ತೃತೀಯ ಬಹುಮಾನ ಪಡೆದ ಬಸವರಾಜ ಡೊಳ್ಳಿನ ಅವರನ್ನು ಸಚಿವ ಹಾಲಪ್ಪ ಆಚಾರ ಸನ್ಮಾನಿಸಿ ಗೌರವಿಸಿದರು.