ಕರೊನಾ ನಿಯಂತ್ರಣ ಬಳಿಕ ಪ್ರಗತಿಯತ್ತ ಚಿತ್ತ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದಲ್ಲಿ ಪರಿಶೀಲನೆ

9CBP1a
Published on

ಚಿಕ್ಕಬಳ್ಳಾಪುರ; ಕರೊನಾ ಎರಡನೇ ಅಲೆ ನಿಯಂತ್ರಣದ ಕಸರತ್ತಿನ ಬಳಿಕ ವಿವಿಧ ಇಲಾಖೆಗಳ ಅಭಿವೃದ್ಧಿ ಕೆಲಸಗಳ ಪ್ರಗತಿಯತ್ತ ಚಿತ್ತ ಹರಿದಿದ್ದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ನೇತೃತ್ವದಲ್ಲಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಲಾಯಿತು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಕೃಷಿ, ತೋಟಗಾರಿಕೆ, ರೇಷ್ಮೆ, ವಸತಿ, ಕುಡಿಯುವ ನೀರಿನ ಯೋಜನೆ, ನರೇಗಾ ಸೇರಿ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಯಿತು. ಮುಂಗಾರು ಮಳೆ ಬೀಳುತ್ತಿರುವುದರಿಂದ ಎಲ್ಲೆಡೆ ಕೃಷಿ ಚಟುವಟಿಕೆ ಚುರುಕಾಗಿದೆ. ಬಿತ್ತನೆ ಕಾರ್ಯ ನಡೆಯುತ್ತಿದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಯಂತ್ರೋಪಕರಣಗಳ ಸಮಸ್ಯೆಯಾಗದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದ ಮನೋಜ್‌ಕುಮಾರ್ ಮೀನಾ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ-ಗೊಬ್ಬರ ಅಗತ್ಯ ಪ್ರಮಾಣದ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಮೇ ನಲ್ಲಿ 67.0 ಮಿ.ಮೀ.ವಾಡಿಕೆ ಮಳೆಗೆ 76.5 ಮಿ.ಮೀ. ಮಳೆ (ಶೇ.14.2 ಹೆಚ್ಚುವರಿ ಮಳೆ) ಬಿದ್ದಿದೆ. ಜೂನ್‌ನಲ್ಲಿ 63.1 ವಾಡಿಕೆ ಮಳೆಗೆ 102 ಮಿ.ಮೀ.(ಶೇ.61.6 ಮಿ.ಮೀ. ಹೆಚ್ಚುವರಿ), ಜುಲೈನಲ್ಲಿ 17.8 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಈಗಾಗಲೇ 76.7 ಮಿ.ಮೀ. ಮಳೆ ಬಿದ್ದಿದೆ. ಜೂನ್ ಮತ್ತು ಜುಲೈನಲ್ಲಿ ನೆಲಗಡಲೆ, ಮುಸುಕಿನ ಜೋಳ, ರಾಗಿ ಬಿತ್ತನೆ ಕಾರ್ಯ ನಡೆಯಲಿದ್ದು, ಇಲ್ಲಿಯವರೆಗೂ ಶೇ.22 ರಷ್ಟ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 1.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಶೇ.14.86 ರಷ್ಟು ನೆಲಗಡಲೆ, ಶೇ.12.97 ರಾಗಿ, ಶೇ.26.91 ಮುಸುಕಿನ ಜೋಳ, ಶೇ.22.98 ತೊಗರಿ ಬಿತ್ತನೆ ಪೂರ್ಣಗೊಂಡಿದೆ ಎಂದರು. ಕರೊನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಚೀಟಿದಾರರಿಗೆ ತಲಾ ಒಬ್ಬರಿಗೆ 5 ಕೆಜಿಯಂತೆ ಅಕ್ಕಿ ಉಚಿತವಾಗಿ ನೀಡಲಾಗುತ್ತಿದ್ದು, ಮುಂದಿನ ನವೆಂಬರ್ ತಿಂಗಳವರೆಗೂ ವಿಸ್ತರಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಸವಿತಾ ಮಾಹಿತಿ ನೀಡಿದರು.

ನರೇಗಾ ತ್ವರಿತ ಕಾಮಗಾರಿ: ನರೇಗಾ ಯೋಜನೆಯಡಿ ತ್ವರಿತವಾಗಿ ಕೆಲಸಗಳು ನಡೆಯುತ್ತಿವೆ. ಪ್ರಸಕ್ತ ಕ್ರಿಯಾ ಯೋಜನೆಯಲ್ಲಿ ಈಗಾಗಲೇ 53 ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. 845 ಕೊಳವೆಬಾವಿ ಮರುಪೂರಣ ಘಟಕಗಳು, 87 ಕಾಲುವೆಗಳು, 35 ಕಲ್ಯಾಣಿಗಳ ಅಭಿವೃದ್ಧಿ, 85 ಮಲ್ಟಿ ಆರ್ಚ್ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉದ್ಯಾನ ಅಭಿವೃದ್ಧಿ, 7,333 ಬಚ್ಚಲು ಇಂಗು ಗುಂಡಿಗಳ ನಿರ್ಮಾಣ ಕಾರ್ಯ ನಡೆದಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ವಿವರಿಸಿದರು.

6 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಜಿಲ್ಲೆಯಲ್ಲಿ ಪ್ರಸ್ತುತ 6 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದ ಗ್ರಾಮಗಳಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ತಿಳಿಸಿದರು.

ವಸತಿ ಯೋಜನೆಯ ಚರ್ಚೆ: ವಸತಿ ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸಭೆಯಲ್ಲಿ ತಾಪಂ ಇಒಗಳಿಗೆ ಸೂಚಿಸಲಾಯಿತು. ಬಸವ, ಅಂಬೇಡ್ಕರ್, ಆಶ್ರಯ ಸೇರಿ ವಿವಿಧ ಯೋಜನೆಗಳಡಿ 46,671 ಮನೆಗಳು ಮಂಜೂರಾಗಿದ್ದು, 33,101 ಮನೆಗಳ ಕಾಮಗಾರಿ ಮುಗಿದಿದೆ. ಉಳಿದಂತೆ 7,505 ಮನೆಗಳು ತಳಪಾಯ, 1,752 ಮನೆಗಳು ಲಿಂಟಲ್ ಮಟ್ಟ, 4,313 ಮನೆಗಳು ರೂಫ್ ಹಂತದಲ್ಲಿ ಕಾಮಗಾರಿ ನಡೆಯತ್ತಿದೆ ಎಂದು ಸಿಇಒ ಪಿ.ಶಿವಶಂಕರ್ ಮಾಹಿತಿ ನೀಡಿದರು. ಗ್ರಾಮಸಭೆಗಳನ್ನು ನಡೆಸಿ ಹೊಸದಾಗಿ ಫಲಾನುಭವಿಗಳ ಆಯ್ಕೆ, ಆಶ್ರಯ ಸಮಿತಿ ಸಭೆಯಲ್ಲಿ ಕ್ಷೇತ್ರದ ಶಾಸಕರಿಂದ ಪಟ್ಟಿಗೆ ಅನುಮೋದನೆ ಪಡೆಯುವುದು, ಫಲಾನುಭವಿಗಳಿಗೆ ತ್ವರಿತವಾಗಿ ವಸತಿ ಸೌಲಭ್ಯ ಕಲ್ಪಿಸುವುದು, ಜಿಪಿಆರ್‌ಎಸ್ ತಂತ್ರಾಂಶದಲ್ಲಿ ಮನೆ ನಿರ್ಮಾಣದ ದತ್ತಾಂಶ ಅಳವಡಿಸಿದ್ದರೂ ಹಣ ಪಾವತಿ ಆಗದ ಪ್ರಕರಣಗಳ ಇತ್ಯರ್ಥದ ಬಗ್ಗೆ ಚರ್ಚೆಯಾಯಿತು.

ನೀರಿನ ಸಮಸ್ಯೆ ಪರಿಹಾರ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಅಂತರ್ಜಲಮಟ್ಟ ವೃದ್ಧಿಯಾಗದಿರುವುದರ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲು ನಿರ್ಧರಿಸಲಾಯಿತು. ಜಿಲ್ಲೆಯ ನಗರ-ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡು ಜಲಾಶಯ, ಬಾಗೇಪಲ್ಲಿ ಪಟ್ಟಣಕ್ಕೆ ಚಿತ್ರಾವತಿ ಜಲಾಶಯ, ಗುಡಿಬಂಡೆಗೆ ಅಮಾನಿ ಭೈರಸಾಗರ ಕೆರೆ, ಚಿಂತಾಮಣಿ ನಗರಕ್ಕೆ ಕನ್ನಂಪಲ್ಲಿ ಕೆರೆಯಿಂದ ನೀರು ಪೂರೈಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೊಸದಾಗಿ ಭಕ್ತರಹಳ್ಳಿ ಅರಸೀಕೆರೆಯಿಂದ ನೀರು ಪೂರೈಕೆ ಕಾಮಗಾರಿ ಕೈಗೊಂಡಿದ್ದು ಈಗಾಗಲೇ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದಂತೆ ಇತರ ನಗರಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಮಾಹಿತಿ ನೀಡಿದರು.

ಅಪೌಷ್ಟಿಕತೆ ನಿವಾರಣೆಗೆ ಕಸರತ್ತು: ಜಿಲ್ಲೆಯಲ್ಲಿನ 39,000 ಎಕರೆ ತೋಟಗಾರಿಕಾ ಬೆಳೆ ಪ್ರದೇಶದಲ್ಲಿ ಶೇ.100 ರಷ್ಟು ಹನಿ ನೀರಾವರಿ ಪದ್ಧತಿ ಅಳವಡಿಸಲು, ಕರೊನಾ ಮೂರನೇ ಅಲೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿ ಅಪೌಷ್ಟಿಕತೆ ನಿವಾರಣೆ, ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಸಾವು ತಡೆಯುವಿಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಧನುರೇಣುಕಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net