

ಶಿವಮೊಗ್ಗ: ಕರೊನಾ ಆತಂಕದ ನಡುವೆಯೂ ಶನಿವಾರ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕರೊನಾ ಕಾರಣ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನಿರಾಕರಿಸಲಾಗಿತ್ತು.
ಶ್ವೇತ ವರ್ಣದ ಬಟ್ಟೆಗಳನ್ನು ಧರಿಸಿದ್ದ ಮುಸ್ಲಿಮರು ಮನೆ ಹಾಗೂ ಸಮೀಪದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. 50 ಜನರಿಗಿಂತ ಹೆಚ್ಚು ಮಂದಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿರಲಿಲ್ಲ. ಕರೊನಾ ಭಯದಿಂದ ಈ ಬಾರಿ ವೃದ್ಧರು, ಮಕ್ಕಳು ಬಹುತೇಕ ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.
ಸೋಂಕು ಹರಡುವ ಕಾರಣದಿಂದ ಬಹುತೇಕ ಪರಸ್ಪರ ಅಪ್ಪುಗೆ ಇಲ್ಲದೇ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಡರು. ಮಸೀದಿಗಳಲ್ಲಿದ್ದ ಧರ್ಮಗುರುಗಳು ಹಾಗೂ ಮೌಲ್ವಿಗಳು ಸಂದೇಶ ಬೋಧಿಸಿದರು. ಪ್ರಾರ್ಥನಾ ಸ್ಥಳಗಳಲ್ಲಿ ಬಡ ಮುಸ್ಲಿಮರಿಗೆ ಉಳ್ಳವರು ದಾನ ನೀಡುವ ಮೂಲಕ ಹಬ್ಬವನ್ನಾಚರಿಸಲು ಅನುವು ಮಾಡಿಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ: ಈದ್ಗಾ ಮೈದಾನ, ಶಾದಿ ಮಹಲ್ ಸಭಾಂಗಣ ಹಾಗೂ ಸಮುದಾಯ ಭವನಗಳಲ್ಲಿ ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲಾಗಿತ್ತು. ಹಾಗಾಗಿ ಯಾರೊಬ್ಬರೂ ಇತ್ತ ಸುಳಿಯಲಿಲ್ಲ. ಅಲ್ಲದೆ ಮಸೀದಿಗಳಲ್ಲಿ ಗರಿಷ್ಠ 50 ಮಂದಿ ಮೀರದಂತೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು.
ಪರಸ್ಪರ ಅಂತರ ಮತ್ತು ಸೋಂಕು ಹರಡದಿರುವಂತೆ ಕ್ರಮ ಅನುಸರಿಸಿ ನಮಾಜು ಮಾಡಿದರು. ಬೆಳಗ್ಗೆ 8ಕ್ಕೆ ಮೊದಲು ಈದ್-ಉಲ್-ಅದ್ಹಾ ನಮಾಜು ಪೂರ್ಣಗೊಳಿಸಿ ಮಸೀದಿ ಬಂದ್ ಮಾಡಿದ್ದರು. ಸಾರ್ವಜನಿಕ ಹಾಗೂ ತೆರೆದ ಸ್ಥಳಗಳಲ್ಲಿ, ಸಮುದಾಯ ಭವನಗಳಲ್ಲಿ ಪ್ರಾಣಿಗಳನ್ನು ಖುರ್ಬಾನಿ ಮಾಡುವುದನ್ನು ಈ ಬಾರಿ ನಿಷೇಧಿಸಲಾಗಿತ್ತು.