ಕರೊನಾ ನಡುವೆಯೂ ಕ್ಷೇತ್ರದ ಅಭಿವೃಧ್ಧಿ

9blrp1
ತಾಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಕೆ.ಎಸ್.ಲಿಂಗೇಶ್ ಭೂಮಿಪೂಜೆ ನೆರವೇರಿಸಿದರು.
Published on

ಬೇಲೂರು: ತಾಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಕೆ.ಎಸ್.ಲಿಂಗೇಶ್ ಗ್ರಾಮಸ್ಥರ ಸಮ್ಮುಖದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಆಡಳಿತದಲ್ಲಿ ಬಹುತೇಕ ಕಾಮಗಾರಿಗಳು ನಡೆದಿವೆ. ಆದರೆ ಇತ್ತೀಚಿನ ಕೆಲ ರಾಜಕಾರಣಿಗಳು ಚುನಾವಣೆ ಮುಂದಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ ಎನ್ನುತ್ತಾರೆ. ಎರಡು ವರ್ಷಗಳ ಕರೊನಾ ನಡುವೆಯೂ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಕೆಲಸ ಮಾಡಿಸಿದ್ದೇನೆ. ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ರೇವಣ್ಣ ಅವರ ಸಹಕಾರದಿಂದಲೂ ಅನುದಾನ ತಂದು ಕೆಲಸ ಮಾಡಿಸಿದ್ದೇನೆ. ಉಳಿದಿರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಿಸುವುದಕ್ಕೆ ಪ್ರಾಸ್ತಾವನೆ ಸಲ್ಲಿಸಿದ್ದೇನೆ. ಅದು ಬಂದ ನಂತರ ಕೆಲಸ ಮಾಡಿಸಲಾಗುವುದು. ಬೇಲೂರು ಕ್ಷೇತ್ರಕ್ಕೆ ಈಗಾಗಲೇ 1800 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಪಡಿಸಲಾಗಿದೆ. ವಿಶೇಷವಾಗಿ ಹೆಬ್ಬಾಳು ಏತ ನೀರಾವರಿ ಯೋಜನೆಯಿಂದ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ಎಂ.ಎ.ನಾಗರಾಜ್ ಮಾತನಾಡಿ, ಶಾಸಕ ಕೆ.ಎಸ್.ಲಿಂಗೇಶ್ ಅವರು ಸರ್ಕಾರದಿಂದ ಹೆಚ್ಚುವರಿಯಾಗಿ ಅನುದಾನ ತಂದು ಕೆಲಸ ಮಾಡಿಸುತ್ತಿದ್ದಾರೆ. ಚಿಕ್ಕಬ್ಯಾಡಿಗೆರೆ ಕಾಲನಿಗೆ ಯಗಚಿ ನೀರಾವರಿ ನಿಗಮದಿಂದ 15 ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯಿತಿಯಿಂದ 40 ಲಕ್ಷದ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಬೇಲೂರು ಕ್ಷೇತ್ರಕ್ಕೆ ಶಾಸಕರು ಸಾವಿರಕ್ಕೂ ಹೆಚ್ಚು ಕೋಟಿಗಳ ಅನುದಾನ ತರುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿತಾ, ಉಪಾಧ್ಯಕ್ಷ ದಾಸಪ್ಪ, ಪಿಡಿಒ ರಾಜಶೇಖರ್, ಜೆಡಿಎಸ್ ಮುಖಂಡರಾದ ಮಹಾದೇವ್, ಸಿ.ಎಚ್.ಮಹೇಶ್, ರವಿಕುಮಾರ್, ಸಿದ್ದೇಗೌಡ, ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net