ಕರೊನಾ ದೃಢವಾದರೆ 7 ದಿನ ಶಾಲೆಗೆ ರಜೆ ; ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಸೋಂಕು ; ಇಲಾಖೆಗಳು ಸಮನ್ವಯ ಸಾಧಿಸಲು ಡಿಸಿ ಸೂಚನೆ

13TMK_DC_Meeting
Published on

ತುಮಕೂರು : ಜಿಲ್ಲೆಯಲ್ಲಿ ಪ್ರತಿದಿನ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟರೆ ಆಯಾ ಶಾಲೆಗಳಿಗೆ 7 ದಿನ ರಜೆ ಘೋಷಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಗುರುವಾರ ಆನ್‌ಲೈನ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಕರೊನಾ ದೃಢಪಡುವ ಪ್ರಮಾಣ ಹೆಚ್ಚಾಗುತ್ತಿದ್ದು, ಮಕ್ಕಳ ಸಂಖ್ಯೆಯೂ ಜಾಸ್ತಿಯಾಗಿದೆ. ಈ ಸಮಯದಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

3ನೇ ಅಲೆ ಹರಡುವಿಕೆಯ ಸ್ವರೂಪ ಭಿನ್ನವಾಗಿದೆ, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳ ಪರಿಶ್ರಮ ಅಗತ್ಯವಿದೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಕರೊನಾ ರೋಗ ಗುಣಲಕ್ಷಣಗಳಿದ್ದು, ಸೋಂಕು ದೃಢಪಟ್ಟ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಬರುವ ಅಗತ್ಯವಿಲ್ಲ. ಮಕ್ಕಳು ಶಾಲೆ ಪ್ರವೇಶಕ್ಕೂ ಮುನ್ನ ಕಡ್ಡಾಯ ಮಾಸ್ಕ್ ಧರಿಸಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದರು.

ಮಕ್ಕಳಲ್ಲಿ ಗಂಭೀರ ಪ್ರಮಾಣದಲ್ಲಿ ಕರೊನಾ ಗುಣಲಕ್ಷಣ ಕಂಡು ಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಮೇರೆಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು, ಅನಗತ್ಯವಾಗಿ ಆಸ್ಪತ್ರೆಗೆ ಸೇರಿಸಬಾರದು ಎಂದರು.

ಸಭೆಯಲ್ಲಿ ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್ ದಾಸ್, ಡಿಡಿಪಿಐ ಸಿ.ನಂಜಯ್ಯ, ಕೃಷ್ಣಮೂರ್ತಿ ಮತ್ತಿತರರ ಅಧಿಕಾರಿಗಳು ಇದ್ದರು.

1.84 ಲಕ್ಷ ಜನರಿಗೆ 2ನೇ ಡೋಸ್ ಬಾಕಿ : ಜಿಲ್ಲೆಯಲ್ಲಿ ಪ್ರತೀ ದಿನ 10 ಸಾವಿರ ಪರೀಕ್ಷೆ ನಡೆಸಬೇಕಿದ್ದು, ಎಲ್ಲೆಡೆಯೂ ಪಾಸಿಟಿವಿಟಿ ದರ ನಿಯಂತ್ರಿಸುವ ಸಲುವಾಗಿ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಶಾಲೆಗಳಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣ ಕಾರ್ಯ ಮುಂದುವರಿಯಲಿದೆ ಎಂದರು.

ಮೊದಲ ಡೋಸ್ ಪೂರ್ಣಗೊಳಿಸಲು 40 ಸಾವಿರ ಬಾಕಿಯಿದ್ದು, 2ನೇ ಡೋಸ್ ಬಾಕಿಯಿರುವ 1.84 ಲಕ್ಷ ಜನರಿಗೆ ಲಸಿಕಾಕರಣ ಪೂರ್ಣಗೊಳಿಸಬೇಕು. ಪಾವಗಡ, ತುಮಕೂರು ನಗರ, ತಿಪಟೂರು, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿಯಲ್ಲಿ ಲಸಿಕಾಕರಣ ಪ್ರಮಾಣ ಕಡಿಮೆ ಇದೆ ಎಂದರು.

ಡಿಎಸ್‌ಗೂ ಕರೊನಾ ದೃಢ ; ತುಮಕೂರು ಜಿಲ್ಲೆಯಲ್ಲಿ ಗುರುವಾರ ಕೂಡ 547 ಜನರಿಗೆ ಕರೊನಾ ದೃಢವಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1990ಕ್ಕೇರಿದೆ. ಈ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.10 ಇದ್ದು, ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು 163, ಶಿರಾ 46, ಮಧುಗಿರಿ 44, ಕೊರಟಗೆರೆ 66, ಗುಬ್ಬಿ 50, ಚಿ.ನಾ.ಹಳ್ಳಿ 15, ಪಾವಗಡ 36, ತಿಪಟೂರು 43 ಹಾಗೂ ತುರುವೇಕೆರೆ 19 ಒಟ್ಟು 547 ಜನರಿಗೆ ಸೋಂಕು ದೃಢವಾಗಿದೆ.

ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರ ಜತೆ ಸಾಕಷ್ಟು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಅವರಿಗೂ ಗುರುವಾರ ಸೋಂಕು ದೃಢವಾಗಿದ್ದು, ಮನೆಯಲ್ಲಿಯೇ ಒಂಟಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೇ.75 ಹಾಸಿಗೆ ಮೀಸಲಿಡಿ : ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಶೇ.75 ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಜತೆ ಸಭೆ ನಡೆಸಿದ ಅವರು, ಆಕ್ಸಿಜನ್, ಬೆಡ್, ಐಸಿಯು, ವೆಂಟಿಲೇಟರ್ ಬೆಡ್ ಸೇರಿ ಎಲ್ಲ ವಿಭಾಗಗಳಲ್ಲಿ ಅವುಗಳ ಸಾಮರ್ಥ್ಯದ ಶೇ.75 ಬೆಡ್ ಮೀಸಲಿರಬೇಕು ಎಂದರು.

ಜಿಲ್ಲೆಯಲ್ಲಿ 1400 ಸಕ್ರಿಯ ಪ್ರಕರಣ ವರದಿಯಾಗಿದ್ದರೂ ಆಸ್ಪತ್ರೆಯಲ್ಲಿ 80 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ 2 ತಿಂಗಳಲ್ಲಿ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದರು.

ಕನಿಷ್ಟ 10 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸುವುದರಿಂದ ಬಸ್‌ಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆ ತಡೆಯಬಹುದು ಎಂದು ಖಾಸಗಿ ಆಸ್ಪತ್ರೆ ವೈದ್ಯರು ಸಲಹೆ ನೀಡಿದರು.

ಚಿಕ್ಕತೊಟ್ಲುಕೆರೆ ಜಾತ್ರೆ ರದ್ದು : ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆ ಅಟವೀ ಜಂಗಮ ಸುಕ್ಷೇತ್ರದಲ್ಲಿ ಜ.15ರಂದು ನಡೆಯಬೇಕಿದ್ದ ಮಕರ ಸಂಕ್ರಾಂತಿಯ ಜಾತ್ರಾಮಹೋತ್ಸವವನ್ನು ಕರೊನಾ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಅಂದು ಅಟವೀ ಸುಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಗದ್ದುಗೆ ದರುಶನ ಪಡೆಯಲು ಅವಕಾಶ ಇದ್ದು ಭಕ್ತರು ಸಹಕರಿಸುವಂತೆ ಸುಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net