ಕರೊನಾ ತೊಲಗಿ ನೆಮ್ಮದಿ ನೆಲೆಸಲಿ, ಸಚಿವ ಎಂಟಿಬಿ ನಾಗರಾಜ್ ಪ್ರಾರ್ಥನೆ, ಜಡಿಗೇನಹಳ್ಳಿ ಹೋಬಳಿಯಲ್ಲಿ ಆಹಾರ ಕಿಟ್ ವಿತರಣೆ

mtb
Published on

ಬೆಂಗಳೂರು ಗ್ರಾಮಾಂತರ: ಲಾಕ್‌ಡೌನ್ ಪರಿಣಾಮವಾಗಿ ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ಮಹಾಮಾರಿ ತೊಲಗಿ ಎಲ್ಲೆಡೆ ನೆಮ್ಮದಿ ನೆಲೆಸಲಿ ಎಂದು ಗ್ರಾಮದೇವತೆಗಳಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಜಡಿಗೇನಹಳ್ಳಿ ಹೋಬಳಿ ದೊಡ್ಡನಳ್ಳಾಳ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಕರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿತ್ತು. ನಿರೀಕ್ಷೆಯಂತೆ ಹಲವು ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದರು.

ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕು ಮತ್ತಷ್ಟು ನಿಯಂತ್ರಣಕ್ಕೆ ಬರಬೇಕಿದ್ದು, ಮತ್ತೆ ಕೆಲವು ದಿನ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸರ್ಕಾರ ಚಿಂತಿಸಿದೆ ಎಂದರು.

ಸಂಕಷ್ಟಕ್ಕೆ ಅಳಿಲು ಸೇವೆ: ಲಾಕ್‌ಡೌನ್‌ನಿಂದಾಗಿ ತಾಲೂಕಿನಲ್ಲಿ ವಿವಿಧ ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗವಿಲ್ಲದೆ ಜೀವನ ನಿರ್ವಹಣೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಪಂಚಾಯಿತಿಗಳಲ್ಲಿ ಆಹಾರ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೇನೆ. ಇದಕ್ಕೆ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಒತ್ತಾಸೆಯಾಗಿದ್ದಾರೆ. ಎಲ್ಲರ ಸಹಕಾರದಿಂದ ಹೊಸಕೋಟೆ ಕ್ಷೇತ್ರದಾದ್ಯಂತ ಸಾಧ್ಯವಾದಷ್ಟು ಜನರ ಸಂಕಷ್ಟಕ್ಕೆ ನೆರವಾಗಿದ್ದೇನೆ ಎಂದು ಎಂಟಿಬಿ ತಿಳಿಸಿದರು.

ನಿಯಮ ಕಡೆಗಣಿಸಬೇಡಿ: ಲಾಕ್‌ಡೌನ್ ತೆರವುಗೊಂಡರು ಸಾರ್ವಜನಿಕರು ಮೈಮರೆಯಬಾರದು. ಸೋಂಕು ತೀವ್ರವಾದರೆ ಮತ್ತೆ ಮತ್ತೆ ಲಾಕ್‌ಡೌನ್ ಪರಿಸ್ಥಿತಿ ಎದುರಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಹಾಮಾರಿಯನ್ನು ಹಿಮ್ಮೆಟ್ಟಿಸಬೇಕು ಎಂದು ಸಚಿವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net