ಕರೊನಾ ತಡೆಗೆ ವೈದ್ಯರ ನಡೆ ಹಳ್ಳಿ ಕಡೆ, ಹಾರೋಹಳ್ಳಿ ಜನರೊಂದಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಚರ್ಚೆ

01ank news and photos 06
Published on

ಆನೇಕಲ್: ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಮಾಯಸಂದ್ರ ಗ್ರಾಪಂನ ಹಾರೋಹಳ್ಳಿಯಲ್ಲಿ ಮಂಗಳವಾರ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಕಾರ್ಯಕ್ರಮದ ಮೂಲಕ ವೈದ್ಯರ ತಂಡ ಗ್ರಾಮಗಳಿಗೆ ತೆರಳಿ ಮನೆ ಮನೆ ಸರ್ವೇ ಮೂಲಕ ಸಂಪೂರ್ಣ ಮಾಹಿತಿ ಕಲೆಹಾಕಿ, ಕರೊನಾ ಲಕ್ಷಣ ಕಂಡು ಬಂದಲ್ಲಿ ಅಂತಹವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಕೊಡಿಸಲಿದೆ ಎಂದರು.

ಈವರೆಗೆ 116 ಗ್ರಾಮಗಳಲ್ಲಿ ಈ ವೈದ್ಯರ ಪರಿಶೀಲನೆ ನಡೆಸಿದ್ದು, 70,969 ಜನರನ್ನು ತಪಾಸಣೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಕರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ಎಲ್ಲ ಇಲಾಖೆ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಹಾರೋಹಳ್ಳಿ ಕರೊನಾಮುಕ್ತ: ಹಾರೋಹಳ್ಳಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ಹಾಗೂ ಕುಂದು ಕೊರತೆ ಆಲಿಸಿ,ವೈದ್ಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಕೆಲ ಕಾಲ ಚರ್ಚೆ ನಡೆಸಿ, ಏನಾದರೂ ತೊಂದರೆ ಇದ್ದರೆ ನನ್ನನ್ನು ಸಂಪರ್ಕಿಸಿ ಪರಿಹರಿಸಲು ಸದಾ ಸಿದ್ಧ ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ, ಹಾರೋಹಳ್ಳಿ ಕರೊನಾಮುಕ್ತ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಹೊರಭಾಗದಿಂದ ಬರುವವರ ಮೇಲೆ ಗ್ರಾಮಸ್ಥರೇ ಕಣ್ಣಿಟ್ಟು, ಕರೊನಾ ಹರಡದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಜತೆಗೆ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಕೂಡ ನಿರಂತರವಾಗಿ ಶ್ರಮಿಸಿ ಸಾಕಾರ ನೀಡಿದ್ದರಿಂದ ಗ್ರಾಮ ಕರೊನಾಮುಕ್ತ ಆಗಿದೆ ಎಂದು ಗ್ರಾಮಸ್ಥ ಕೃಷ್ಣಪ್ಪ ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ವಿನಯ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾನ್ ಖಾನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net