

ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಕರೊನಾ ಹರಡುವಿಕೆ ನಿಯಂತ್ರಣ ಹಾಗೂ ಸೋಂಕಿತರನ್ನು ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ತಿಳಿಸಿದರು. ಚಿಕ್ಕಮಗಳೂರು ತಾಲೂಕು ವಸ್ತಾರೆ ಹೋಬಳಿಯ ಕೋಡಾಳು ಗ್ರಾಮದಲ್ಲಿ ಸೋಮವಾರ ನಡೆದ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಜನರು ಸಹಕರಿಸಿದಲ್ಲಿ ರೇಷನ್ ಮತ್ತು ವ್ಯಾಕ್ಸಿನೇಷನ್‍ಗೆ ಆದ್ಯತೆ ನೀಡಲಾಗುವುದು ಎಂದರು.
ಜನರು ಸಹಕರಿಸಬೇಕು:
ಜಿಲ್ಲೆಯಲ್ಲಿ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಅಧಿಕಾರಿಗಳ ತಂಡ ಗ್ರಾಮದ ಮನೆ ಮನೆಗೆ ಭೇಟಿ ನೀಡುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಕರೊನಾ ಪರೀಕ್ಷೆಗೆ ಒಳಪಡಬೇಕು. ಸರ್ಕಾರದ ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. ಈ ಗ್ರಾಮದ ಒಟ್ಟು 42 ಮನೆಗಳಲ್ಲಿ 192 ಜನರು ವಾಸಿಸುತ್ತಿದ್ದು ಅದರಲ್ಲಿ ನಾಲ್ವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಗ್ರಾಮದ ಜನರು ಸಹಕರಿಸಿದಲ್ಲಿ ಮಾತ್ರ ಕರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದರು. ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ಗ್ರಾಪಂ ಅಧ್ಯಕ್ಷ ಉಮೇಶ್, ವಸ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಭಿನಂದನ್, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಮತ್ತಿತರರಿದ್ದರು.