

ಗದಗ: ಕರೊನಾ ಸೋಂಕಿತ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸಿದವರನ್ನು ಗುರುತಿಸಿ ಅವರನ್ನು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ನಿಗಾವಹಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ಫೋರ್ಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಇಂತಹ ಪ್ರಕರಣಗಳಲ್ಲಿ ಅವಶ್ಯವಿದ್ದರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವಸತಿ ಶಾಲೆಗಳನ್ನು ಬಳಸಿಕೊಂಡು ಊಟ ಹಾಗೂ ಅಗತ್ಯದ ಔಷಧೋಪಚಾರದ ವ್ಯವಸ್ಥೆ ಜತೆಗೆ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ ಪ್ರತ್ಯೇಕ ನಿಗಾದಲ್ಲಿಡಬೇಕೆಂದು ಸೂಚಿಸಿದರು.
ಕರೊನಾ ಸೋಂಕು ಹರಡದಂತೆ ಈಗಾಗಲೇ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಜಾರಿಗೊಳಿಸಿದ್ದು, ಇದರ ಅನುಷ್ಠಾನಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ಗಳನ್ನು ಪೂರೈಸಬೇಕೆಂದು ಸೂಚನೆ ನೀಡಿದರು.
ನಿರ್ಗತಿಕರಿಗೆ ಮಾನವೀಯ ದೃಷ್ಟಿಯಿಂದ ಅಗತ್ಯದ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಅನುದಾನದ ಕೊರತೆ ಇದ್ದರೆ ಶಾಸಕರ ಅನುದಾನವನ್ನು ಬಳಸಿಕೊಳ್ಳಬೇಕು ಎಂದರು.
ಹೊರರಾಜ್ಯಗಳಲ್ಲಿ ಸಿಲುಕಿರುವ ಜಿಲ್ಲೆಯ ಜನರಿಗೆ ಅಗತ್ಯದ ಮೂಲ ಸೌಲಭ್ಯ ಒದಗಿಸಲು ಅಲ್ಲಿಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಲು ಅಗತ್ಯದ ಕ್ರಮ ಜರುಗಿಸಬೇಕು ಎಂದರು.
ನಗರ ಪ್ರದೇಶಗಳಲ್ಲಿ ಈಗಾಗಲೇ ಜನ ಸಾಂಧ್ರತೆ ನಿಯಂತ್ರಿಸುವ ನಿಟ್ಟಿನಲ್ಲಿ ಮನೆ ಮನೆಗೆ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಜಾರಿಮಾಡಿದ್ದು, ಈ ವ್ಯವಸ್ಥೆಯಲ್ಲಿ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುವ ಕುರಿತ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದಲೇ ತರಕಾರಿ ದರಗಳನ್ನು ನಿಗದಿಪಡಿಸಿ ಮಾರಾಟಕ್ಕೆ ಕ್ರಮ ಜರುಗಿಸಲು ನಿರ್ದೇಶನ ನೀಡಿದರು.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗಂಟಲು ಮಾದರಿ ಪರೀಕ್ಷೆಗಾಗಿ ಟೆಸ್ಟಿಂಗ್ ಲ್ಯಾಬ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಚಿವ ಸಿ.ಸಿ. ಪಾಟೀಲ ಸೂಚಿಸಿದರು.
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಕರೊನಾ ವೈರಾಣುವಿನ ಯಾವುದೇ ಧನಾತ್ಮಕ ವರದಿ ಬರದೆ ಇರುವದು ಸಮಾಧಾನಕರ ಸಂಗತಿಯಾಗಿದೆ ಎಂದರು.
ಈ ವಿಷಯದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಉತ್ತಮ ಕಾರ್ಯನಿರ್ವಹಿಸಿದ್ದು ಸಾರ್ವಜನಿಕರು ಅಗತ್ಯದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕರೊನಾ ವೈರಸ್ ಹರಡದಂತೆ ತೆಗೆದುಕೊಂಡಂತಹ ಮುಂಜಾಗ್ರತಾ ಕ್ರಮಗಳ ಕುರಿತ ಮಾಹಿತಿ ಪಡೆದು ರ್ಚಚಿಸಿದ ಅವರು, ಜಿಲ್ಲೆಯಲ್ಲಿ ಅವಶ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಗತ್ಯದ ವೈದ್ಯಕೀಯ ಸಾಮಗ್ರಿಗಳಿಗೆ ಯಾವುದೇ ಕೊರತೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದರು.
ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತರಕಾರಿ ಮಾರಾಟ ಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಜಾರಿಗೊಳಿಸಬೇಕು. ಹೆಚ್ಚಿನ ದರಕ್ಕೆ ತರಕಾರಿ ಮಾರಾಟವಾಗುವುದನ್ನು ಜಿಲ್ಲಾಡಳಿತ ತಡೆಗಟ್ಟಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕರೊನಾ ವೈರಸ್ ತಡೆಗಟ್ಟಲು ಜಿಲ್ಲೆಯಲ್ಲಿ ತೆಗೆದುಕೊಂಡಂತಹ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಸಿಇಒ ಡಾ.ಆನಂದ ಕೆ, ಎಸ್ಪಿ ಎನ್.ಯತೀಶ ಮತ್ತಿತರರು ಉಪಸ್ಥಿತರಿದ್ದರು.
EndFragment