

ಬೀದರ್: ಭಾರತ ಸೇವಾದಳ ಜಿಲ್ಲಾ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಕರೊನಾ ಜಾಗೃತಿ ಮತ್ತು ಭಾರತ ಸೇವಾ ದಳ ಮಾಹಿತಿ ಶಿಬಿರ ಶನಿವಾರ ಇಲ್ಲಿ ನಡೆಯಿತು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಪ್ಪಾ ಬಬಚಡಿ ಉದ್ಘಾಟಿಸಿ ಮಾತನಾಡಿ, ಕರೊನಾ ಬಗ್ಗೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳು ಕಡ್ಡಾಯ ಪಾಲಿಸಿ ಮಾರಕವಾದ ರೋಗದಿಂದ ದೂರವಿರಬೇಕು ಎಂದರು.
ಭಾರತ ಸೇವಾ ದಳ ಕೇಂದ್ರ ಸಮಿತಿ ಸಂಚಾಲಕ ಶಿವಶರಣಪ್ಪಾ ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯನ್ನು ಮಾಡಬೇಕಾದರೆ ಸದಾ ಕೆಲಸದಲ್ಲಿ ತೊಡಗಿ ಕ್ರಿಯಾಶೀಲತೆ ತೋರಿಸಬೇಕು. ನಿರ್ದಿಷ್ಟ ಗುರಿ ಹೊಂದಿ ಅದಕ್ಕೆ ಮುಟ್ಟಲು ಆತ್ಮವಿಶ್ವಾಸದ ಹೆಜ್ಜೆ ಇಡಬೇಕು. ಕರೊನಾ ಎಲ್ಲರಿಗೂ ಪಾಠ ಕಲಿಸಿದೆ. ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದರು.
ಪ್ರಮುಖರಾದ ಶಕುಂತಲಾ ವಾಲಿ, ಡಾ. ಪ್ರಕಾಶ, ಡಾ. ವಿದ್ಯಾ ಪಾಟೀಲ್, ಡಾ.ಭೀಮಶಾ, ಸಂಜೀವಕುಮಾರ ಅಪ್ಪೆ, ಶ್ರೀನಿವಾಸ ರೆಡ್ಡಿ ಇದ್ದರು. ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಸಿದ್ದಣ್ಣ ಯಳಸಂಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಸುಂದರರಾಜ ಸ್ವಾಗತಿಸಿದರೆ, ದಿಲೀಪ ಸೋಲಾಪುರೆ ವಂದಿಸಿದರು. ಪ್ರೊ. ಮನೋಜಕುಮಾರ ನಿರೂಪಣೆ ಮಾಡಿದರು.