ಕರೊನಾ ಜಾಗೃತಿ ಮೂಡಿಸಿ, ಡಿಎಚ್‌ಒಗೆ ಜಿಪಂ ಅಧ್ಯಕ್ಷ ವೆಂಕಟೇಶ್ ತಾಕೀತು

11-klr-5
Published on

ಕೋಲಾರ: ಕರೊನಾದಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಡಿಎಚ್‌ಒಗೆ ತಾಕೀತು ಮಾಡಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಕರೋನಾ ಕುರಿತು ಮಾತನಾಡಿ, ಕರೋನಾ ಸಂಬಂಧಿಸಿದ ಒಂದೇ ಒಂದು ಪ್ರಕರಣ ಜಿಲ್ಲೆಯಲ್ಲಿ ಇರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕರೋನಾ ಜಿಲ್ಲೆಗೆ ವ್ಯಾಪಿಸಿಲ್ಲ. ಆದರೆ ಔಷಧ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಸಿ 8 ರೂ.ಗೆ ಸಿಗುವ ಮಾಸ್ಕನ್ನು 30 ರಿಂದ 40 ರೂ.ಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಕೂಡಲೆ ಔಷಧ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಡಾಬಾ ಮತ್ತು ಮಾಂಸದಂಗಡಿಗಳಲ್ಲಿ ಫ್ರಿಡ್ಜ್‌ಗಳಲ್ಲಿ ಸಂಗ್ರಹಿಸಿಟ್ಟ ಹಳೇ ಮಾಂಸವನ್ನು ಹೊರಹಾಕಿಸಬೇಕು ಎಂದು ತಾಕೀತು ಮಾಡಿದರು.

ಸಿಇಒ ಎಚ್.ವಿ.ದರ್ಶನ್ ಮಾತನಾಡಿ, ಜಿಲ್ಲೆಯಲ್ಲಿ ಕೆಮ್ಮು, ಶೀತ, ನೆಗಡಿಯಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ. ಎಲ್ಲೆಡೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಉಸಿರಾಟದ ತೊಂದರೆ ಇದ್ದರೆ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ ಎಂದರು.

ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ಕರೊನಾ ಅನುಮಾನ ಬಂದಲ್ಲಿ ರೋಗಿ ರಕ್ತ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಿ 24 ಗಂಟೆಯೊಳಗೆ ವರದಿ ತರಿಸಿಕೊಂಡು ಪಾಸಿಟಿವ್ ಕಂಡುಬಂದಲ್ಲಿ ತುರ್ತು ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ ಎಂದರು.

ಸರ್ಕಾರದ ಸೂಚನೆ ಮೇರೆಗೆ 1ರಿಂದ 5ನೇ ತರಗತಿ ಮಕ್ಕಳಿಗೆ ಪರೀಕ್ಷೆಯನ್ನು ನಿಗದಿತ ವೇಳಾಪಟ್ಟಿಗೆ ಮುನ್ನವೇ ನಡೆಸಲಾಗುತ್ತಿದೆ, ಮೇ 23ರೊಳಗೆ 7ರಿಂದ 9ನೇ ತರಗತಿ ಪರೀಕ್ಷೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆದಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.

ಮೇಲ್ವಿಚಾರಕರ ಬದಲಾವಣೆಗೆ ಸೂಚನೆ: ಕೋಲಾರ ಗದ್ದೆಕಣ್ಣೂರು ರಾಗಿ ಖರೀದಿ ಕೇಂದ್ರದ ಮೇಲ್ವಿಚಾರಕ ಜಿ.ಮನೋಗರನ್ ವಿರುದ್ಧ ಸಾಕಷ್ಟು ದೂರುಗಳಿವೆ. ನಾನು 4 ಬಾರಿ ಬುದ್ಧಿ ಹೇಳಿದರೂ ತಿದ್ದಿಕೊಂಡಿಲ್ಲ, ಕೂಡಲೇ ಬದಲಾಯಿಸುವಂತೆ ನಾಗರಿಕ ಆಹಾರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಶಿವಣ್ಣ ಅವರಿಗೆ ಜಿಪಂ ಅಧ್ಯಕ್ಷ ವೆಂಕಟೇಶ್ ಸೂಚಿಸಿದರು.

ಪ್ಲಾಸ್ಟಿಕ್ ಫಲಕಕ್ಕೆ ತಕರಾರು: ಶ್ರೀನಿವಾಸಪುರದಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಠಾಚಾರ ಉಲ್ಲಂಘಿಸಲಾಗಿದೆ. ಅಂಗನವಾಡಿ ಸೇರಿ ಇನ್ನಿತರ ಕಟ್ಟಡಗಳ ಮೇಲೆ ಶಿಲಾನ್ಯಾಸ ಮತ್ತು ಉದ್ಘಾಟನೆಗೆ ಸಂಬಂಧಿಸಿದ ಕಲ್ಲು ಕೆತ್ತನೆಯ ಫಲಕದ ಬದಲು ಪ್ಲಾಸ್ಟಿಕ್ ಫಲಕ ಅಳವಡಿಸಲಾಗಿದೆ. ಮುಂದೊಂದು ದಿನ ಫಲಕ ತೆರವುಗೊಳಿಸುವ ಅನುಮಾನವಿದೆ, ಕಲ್ಲಿನ ಫಲಕ ಅಳವಡಿಸದಿದ್ದರೆ ಸಭೆಯಿಂದ ನಿರ್ಗಮಿಸುವುದಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ಬೆದರಿಕೆ ಹಾಕಿದರು.

ಈ ವಿಷಯ ಸಭೆಯಲ್ಲಿ ಚರ್ಚಿಸೋದು ಬೇಡ, ಸಭೆ ನಂತರ ಅಧಿಕಾರಿಗಳನ್ನು ಕರೆಸಿಕೊಂಡು ಸಮಸ್ಯೆ ಬಗೆಹರಿಸೋಣ ಎಂದು ಸಿಇಒ ದರ್ಶನ್ ಆಶ್ವಾಸನೆ ನೀಡಿದರು.

ಜಿಪಂ ಉಪಾಧ್ಯಕ್ಷೆ ಯಶೋದಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಶ್ರೀ ಮಂಜುನಾಥ್, ಉಪ ಕಾರ್ಯದರ್ಶಿ ಸಂಜೀವಪ್ಪ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ನೌಕರರ ಕಾರುಬಾರು ಹೆಚ್ಚಾಗಿದೆ. ತಾಲೂಕಿನಲ್ಲೂ ಸಹಾಯಕ ನಿರ್ದೇಶಕರಿಲ್ಲ. ಇಲಾಖೆಯಲ್ಲಿ 15 ವರ್ಷ ಅನುಭವ ಇರುವುದರಿಂದ ಉತ್ತಮ ಕೆಲಸ ಮಾಡಬೇಕೆಂದು ಕೋಲಾರಕ್ಕೆ ಬಂದಿದ್ದೇನೆ.

ಕೃಷ್ಣಪ್ಪ, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಕೋಲಾರ

ಅಧಿಕಾರಿಗಳ ಗೈರಿಗೆ ಅಧ್ಯಕ್ಷರು ಗರಂ: ಕೆಡಿಪಿ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬರಲ್ಲ ಅಂದ ಮೇಲೆ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಾನು ಯಾರ ಜತೆ ಚರ್ಚಿಸಬೇಕು, ಸಮಸ್ಯೆಗೆ ಪರಿಹಾರ ಹೇಗೆ ಹುಡುಕಬೇಕು, 4 ತಿಂಗಳಾದರೂ ಅಧಿಕಾರಿಗಳ ವರ್ತನೆ ಬದಲಾಗಿಲ್ಲ. ಎಲ್ಲದಕ್ಕೂ ಒಂದು ತಾಳ್ಮೆ ಇರುತ್ತದೆ ಎಂದು ಗರಂ ಆದ ಸಿ.ಎಸ್.ವೆಂಕಟೇಶ್ ಇಂತಹ ಸಭೆಯಲ್ಲಿ ಇರುವುದಕ್ಕಿಂತ ಬಹಿಷ್ಕಾರ ಹಾಕುವುದೇ ಒಳ್ಳೆಯದು ಎಂದು ಸಭೆಯಿಂದ ಎದ್ದು ಹೋಗಲು ಅಣಿಯಾದರು. ಕೆಲ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಕೆಲವರು ಸ್ವಲ್ಪ ತಡವಾಗಿ ಹಾಜರಾಗಲಿದ್ದಾರೆ, ಅನಧಿಕೃತವಾಗಿ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದ ಸಿಇಒ ಕೇಂದ್ರ ಸ್ಥಾನದಲ್ಲಿದ್ದ ಅಧಿಕಾರಿಗಳನ್ನು ಫೋನ್ ಮಾಡಿ ಸಭೆಗೆ ಕರೆಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net