ಕರೊನಾ ಜಾಗೃತಿ ಅಭಿಯಾನ : ವಿಜಯವಾಣಿ, ದಿಗ್ವಿಜಯ ಆಯೋಜನೆ

7CBP3
Published on

ಚಿಕ್ಕಬಳ್ಳಾಪುರ : ವಿಜಯವಾಣಿ ಮತ್ತು ದಿಗ್ವಿಜಯ 24/7 ಸುದ್ದಿವಾಹಿನಿ ವತಿಯಿಂದ ಬುಧವಾರ ನಗರದ ವಿವಿಧೆಡೆ ಕರೊನಾ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು.

ನಗರದ ಭುವನೇಶ್ವರಿ ವೃತ್ತ, ಹಳೇ ಸಂತೆ ಮೈದಾನ, ಹಳೇ ಬಸ್ ನಿಲ್ದಾಣ, ಎಪಿಎಂಸಿ ಮಾರುಕಟ್ಟೆ ಸೇರಿ ಪ್ರಮುಖ ವೃತ್ತ ಮತ್ತು ವಿವಿಧ ವಾರ್ಡುಗಳಲ್ಲಿ ಜಾಗೃತಿ ವಾಹನವು ಸಂಚರಿಸಿ, ಕರೊನಾ ಮಾರ್ಗಸೂಚಿ ನಿಯಮಗಳ ಪಾಲನೆಯೊಂದಿಗೆ ಸುರಕ್ಷಿತವಾಗಿರಲು ಜನರಲ್ಲಿ ತಿಳಿವಳಿಕೆ ಮೂಡಿಸಿತು. ಆಟೋ ಚಾಲಕರು, ವರ್ತಕರು, ವಿದ್ಯಾರ್ಥಿಗಳು, ಮಹಿಳೆಯರು, ರೈತರು ಸೇರಿ ಹಲವರು ಕರೊನಾ ಸೋಂಕಿನ ದುಷ್ಪರಿಣಾಮ ಮತ್ತು ಎಚ್ಚರಿಕೆಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈಗಾಗಲೇ ತಜ್ಞರು ಮೂರನೇ ಅಲೆ ಕಾಡುವ ಆತಂಕ ವ್ಯಕ್ತಪಡಿಸಿದ್ದಾರೆ. ಮೊದಲ ಮತ್ತು ಎರಡನೇ ಅಲೆಗೆ ವ್ಯಾಪಕವಾಗಿ ಅನುಭವಿಸಿದ ಸಂಕಷ್ಟದ ಅನುಭವ ಜನರಿಗಾಗಿದೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ ಮತ್ತು ಸ್ವಚ್ಛತೆ ನಿರ್ವಹಣೆ ನಿಯಮ ಉಲ್ಲಂಘಿಸಬಾರದು. ಅನವಶ್ಯಕವಾಗಿ ಗುಂಪು ಸೇರದೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಮೊದಲಿನಿಂದಲೂ ವಸ್ತುನಿಷ್ಠ ಸುದ್ದಿಗಳ ಮೂಲಕ ಗಮನ ಸೆಳೆಯುವುದರ ಜತೆಗೆ ಜನಪರ ಸೇವಾ ಚಟುವಟಿಕೆ ಕೈಗೊಳ್ಳುತ್ತಿರುವ ವಿಜಯವಾಣಿ ಮತ್ತು ದಿಗ್ವಿಜಯ ಚಾನಲ್ ಕಾರ್ಯ ಶ್ಲಾಘನೀಯ ಎಂದು ಭುವನೇಶ್ವರಿ ಆಟೋ ಚಾಲಕ ಸಂಘದ ಕೆ.ಎಲ್.ಕೃಷ್ಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ದಿಗ್ವಿಜಯ ಚಾನಲ್‌ನ ವೆಂಕಟೇಶಬಾಬು, ವಿಜಯವಾಣಿ ಜಿಲ್ಲಾ ವರದಿಗಾರ ಎನ್.ವೆಂಕಟೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net