ಕರೊನಾ ಜತೆ ಬಿಸಿಲ ರಣಕೇಕೆ

govind karjol
Published on

ವಾದಿರಾಜ ವ್ಯಾಸಮುದ್ರ ಕಲಬುರಗಿ: ಒಂದೆಡೆ ಕರೊನಾ ಅಟ್ಟಹಾಸ, ಇನ್ನೊಂದೆಡೆ ರಣಬಿಸಿಲಿನಿಂದಾಗಿ ಜಿಲ್ಲೆ ಜನತೆ ತತ್ತರಿಸಿದ್ದು, ವೃದ್ಧರು ಮತ್ತು ಮಕ್ಕಳು ಒದ್ದಾಡುತ್ತಿದ್ದಾರೆ. ಒಂದು ವಾರದಿಂದ ಬಿಸಿಲಿನ ಪ್ರತಾಪ ಕರೊನಾಗೆ ಚಾಲೆಂಜ್ ಮಾಡಿದಂತಿದೆ. ಮಂಗಳವಾರ ಜಿಲ್ಲೆಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಳಗ್ಗೆಯಿಂದಲೇ ಬಿಸಿಲಿನ ಅಬ್ಬರ ಶುರುವಾಗುತ್ತಿದೆ. ಮಧ್ಯಾಹ್ನದ ವೇಳೆಗೆ ನೆಲ ಕಾದ ಹಂಚಿನಂತಾಗಿರುತ್ತದೆ. ವಿಪರೀತ ಬಿಸಿಗಾಳಿ ಬೀಸುತ್ತದೆ. ಸಂಜೆಯಾದರೂ ವಾತಾವರಣದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಫ್ಯಾನ್ಗಳಿಂದ ಬಿಸಿಗಾಳಿ ಬರುತ್ತಿದ್ದರೆ, ನೀರು ತನ್ನಷ್ಟಕ್ಕೆ ಕಾದು ಬಿಡುತ್ತದೆ.
ಕರೊನಾ ಹಿನ್ನಲೆಯಲ್ಲಿ ಮನೆ ಬಿಟ್ಟು ಬರಬೇಡಿ ಎಂದು ಒಂದೆಡೆ ಹೇಳುವ ಸರ್ಕಾರ, ಇನ್ನೊಂದೆಡೆ ಜನ ಸಂಚಾರ ಮೇಲೆ ನಿಯಂತ್ರಣ ಸಾಧಿಸಿಲ್ಲ. ಹೀಗಾಗಿ ಜನ ಸಂಚಾರ ಯಥೇಚ್ಛ ನಡೆದಿದೆ. ಮಂಗಳವಾರ ಕರೊನಾ ಹೊಸ ಪ್ರಕರಣ ದಾಖಲಾಗಿಲ್ಲ ಎಂಬುದು ಸಮಾಧಾನಕರವಾದರೂ ಬಿಸಿಲಿನ ತಾಪಕ್ಕೆ ಇನ್ನಿಲ್ಲದ ತ್ರಾಸ ಎದುರಿಸುವಂತಾಗಿದೆ.
ಈ ತಾಪಗಳ ಜತೆ ಜಿಲ್ಲೆಯಲ್ಲಿ ಜಲಕ್ಷಾಮವೂ ಎಲ್ಲೇ ಮೀರಿದೆ. ಪ್ರಮುಖ ನದಿ, ಹಳ್ಳ, ಕೆರೆಗಳು ಒಣಗಿವೆ. ಬಹುತೇಕ ಬೋರ್ವೆಲ್ಗಳು ಡ್ರೈ ಆಗಿವೆ. ಭೀಮಾ ನದಿ ಬತ್ತಿದ್ದರಿಂದ ಅಫಜಲಪುರ, ಜೇವರ್ಗಿ , ಚಿತ್ತಾಪುರ, ಕಲಬುರಗಿ ತಾಲೂಕು ಮತ್ತು ಯಾದಗಿರಿ ಜಿಲ್ಲೆ ಸೇರಿ 200ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಿನ ಬರ ಉಂಟಾಗಿದೆ.
ಕುಡಿಯುವ ನೀರಿನ ಕೊರತೆ ನೀಗಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಲ್ಲಲ್ಲಿ ಬೋರ್ವೆಲ್ ಕೊರೆತ, ಯೋಜನೆಗಳ ಜಾರಿ ಹೀಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿವೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಆದೇಶಿಸಿದ್ದಾರೆ.
ಭೀಮಾ ನದಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಹರಿಸುವ ಮೂಲಕ ಅಫಜಲಪುರ, ಜೇವರ್ಗಿ , ಕಲಬುರಗಿ ಮತ್ತು ಚಿತ್ತಾಪುರ ತಾಲೂಕುಗಳಿಗೆ ಕುಡಿಯಲು ಅನುಕೂಲ ಮಾಡಿಕೊಡಬೇಕೆಂದು ಶಾಸಕ ಎಂ.ವೈ. ಪಾಟೀಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲೆಯ ಜನ ಇನ್ನೂ ಒಂದೂವರೆ ತಿಂಗಳು ಬೇಸಿಗೆ ಕಳೆಯಬೇಕಾಗಿದ್ದು, ಉಷ್ಣಾಂಶ ಇನ್ನಷ್ಟು ಹೆಚ್ಚಿದರೂ ಅಚ್ಚರಿಪಡಬೇಕಿಲ್ಲ.

ಫೋನ್ ಇನ್ನಲ್ಲೂ ನೀರಿನದ್ದೇ ದೂರು
ಕರೊನಾ ಹಿಮ್ಮೆಟ್ಟುವ ಹಿನ್ನೆಲೆಯಲ್ಲಿ ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅಜಯಸಿಂಗ್ ಅವರ ಫೋನ್ ಇನ್ ಕಾರ್ಯಕ್ರಮ ವಿಜಯವಾಣಿ ಏರ್ಪಡಿಸಿತ್ತು. ಈ ವೇಳೆ ಅವರಿಗೆ ಎದುರಾದ ಪ್ರಶ್ನೆಗಳಲ್ಲಿ ಬಹುಪಾಲು ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದ್ದು, ಭೀಕರತೆ ತೋರಿಸಿಕೊಡುತ್ತಿದೆ.

ಆಕಾಶದತ್ತ ರೈತ ಮುಖ
ಒಂದೆಡೆ ಕರೊನಾ, ಇನ್ನೊಂದೆಡೆ ಬಿಸಿಲ ತಾಪದಲ್ಲಿ ರೈತರು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗುವುದೇ ಕಷ್ಟಕರ ಎನಿಸಿದೆ. ಒಂದೆರಡು ಬಾರಿ ಭಾರಿ ಮಳೆಯಾದರೆ ಭೂಮಿ ಹದ ಮಾಡಬಹುದಾಗಿದೆ. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net