

ಔರಾದ್: ಕರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಸಂತಪುರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯ ಡಾ. ಮಹೇಶ ಬಿರಾದಾರ ಅವರು ಮತ್ತೆ ಸೇವೆಗೆ ಸೈ ಎನ್ನುವ ಮೂಲಕ ಮಾದರಿ ಹೆಜ್ಜೆಯಿಟ್ಟಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕರೊನಾ ವಿರುದ್ಧದ ಸಮರದಲ್ಲಿ ಸಕ್ರಿಯವಾಗಿರುವ ಡಾ. ಮಹೇಶ ಅವರಿಗೆ ಎರಡು ವಾರದ ಹಿಂದೆ ಸೋಂಕು ದೃಢಪಟ್ಟಿತ್ತು. ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ ವೇಳೆ ಯಾರದೋ ಸಂಪರ್ಕದಿಂದ ಇವರಿಗೆ ಸೋಂಕು ಅಂಟಿದೆ. ವೈರಸ್ ಅಂಟಿದ ಕಾರಣ ಆತಂಕಕ್ಕೊಳಗಾಗದೇ ನಿಯಮಿತ ಚಿಕಿತ್ಸೆ ಪಡೆದು ಗುಣಮುಖರಾಗಿ ಗುರುವಾರ ಸೇವೆಗೆ ಹಾಜರಾಗಿದ್ದಾರೆ. ಇವರ ಈ ಹೆಜ್ಜೆಯು ಕರೊನಾ ವಾರಿಯರ್ಗಳಾಗಿ ಕೆಲಸ ಮಾಡುತ್ತಿರುವವರಿಗೆ ಹಾಗೂ ಸೋಂಕಿತರಿಗೂ ಮಾದರಿ ಸಂದೇಶ ರವಾನಿಸಿದೆ.
ಜುಲೈ 1ರಂದು ಜ್ವರ, ನೆಗಡಿ, ಶೀತ, ಕೆಮ್ಮು ಮೈಕೈ ನೋವು ಆರಂಭವಾಯಿತು. ತಕ್ಷಣ ಬಿಸಿ ನೀರು ಕುಡಿಯಲು ಪ್ರಾರಂಭಿಸಿದೆ. ನಂತರ ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿ ಕಳುಹಿಸಿದಾಗ ಜು. 5 ರಂದು ಪಾಸಿಟಿವ್ ಬಂತು. ಸಂತಪುರ ಆರೋಗ್ಯ ಕೇಂದ್ರದಲ್ಲಿಯ ಪ್ರತ್ಯೇಕ ಕೋಣೆಯಲ್ಲಿ ಉಳಿದು ಚಿಕಿತ್ಸೆ ಪಡೆದಿರುವೆ. ನಿತ್ಯ ಮಾತ್ರೆ ಸೇವಿಸಿ ಒಂದು ವಾರದ ನಂತರ ಮತ್ತೆ ಕರೊನಾ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ಬಂದಿದೆ. ಈಗ ಸಾರ್ವಜನಿಕ ಸೇವೆ ಮುಂದುವರಿಸಿರುವೆ ಎಂದು ಡಾ. ಮಹೇಶ ವಿಜಯವಾಣಿಗೆ ತಿಳಿಸಿದರು.
ಯಾರೂ ಕರೊನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳ ಜತೆಗೆ ಔಷಧೋಪಚಾರ ಹಾಗೂ ನಿತ್ಯ ಯೋಗ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯ, ಆತ್ಮವಿಶ್ವಾಸ ಇರಬೇಕು. ಇದರಿಂದ ಕರೊನಾ ಓಡಿಸಬಹುದು. ಕರೊನಾ ಹೇಗೆ ಬಂತು ಎಂದು ಚಿಂತಿಸಿ ಆತಂಕಪಡುವುದಕ್ಕಿಂತ ಮುಖ್ಯವಾಗಿ ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂಬ ಮಂತ್ರ ಪಠಿಸಬೇಕೆಂದು ಅವರು ಸೋಂಕಿತರಿಗೆ ಸಲಹೆ ನೀಡಿದ್ದಾರೆ.