

ಡಂಬಳ: ‘ಕರೊನಾ ವೈರಸ್ ಭಯದಿಂದ ಸಾಕಾಗೈತಿ ಊರು ಉಸಾಬರಿ ಬೇಡ’ ಎಂದು ಗ್ರಾಮದ ರೈತಾಪಿ ಕುಟುಂಬಗಳು ತಮ್ಮ ಜಮೀನಿನಲ್ಲಿ ಠಿಕಾಣಿ ಹೂಡಲು ನಿರ್ಧರಿಸಿದ್ದಾರೆ.
ಕರೊನಾ ಬಗೆಗೆ ಸರ್ಕಾರ, ಮಾಧ್ಯಮ, ಪೊಲೀಸ್ ಇಲಾಖೆ, ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯಿಂದ ಯಾರೊಬ್ಬರೂ ಹೊರಗೆ ಬರಬೇಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ರಕ್ಷಣೆಗಾಗಿ ನಮ್ಮ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಅಲ್ಲಿಯೇ ವಾಸಿಸಲು ತೀರ್ಮಾನ ಮಾಡಿದ್ದೇವೆ ಎಂದು ಗ್ರಾಮದ ಭರಮಪ್ಪ ಒಂಟೆಲಭೋವಿ ಹಾಗೂ ಹನುಮಪ್ಪ ನರಗುಂದ ತಿಳಿಸಿದರು.
ಹೊಲಗಳಲ್ಲಿ ನೀರಾವರಿ ವ್ಯವಸ್ಥೆ ಇರುವುದರಿಂದ ಬೇಸಿಗೆ ಶೇಂಗಾ ಮತ್ತು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದೇವೆ. ಹೀಗಾಗಿ, ಬೆಳೆಗಳು ರಕ್ಷಣೆಯೂ ಆಯ್ತು, ನಮ್ಮ ಕುಟುಂಬಗಳ ರಕ್ಷಣೆಯೂ ಆಗುತ್ತದೆ ಎಂದು ಜಮೀನಿನಲ್ಲಿಯೇ ಬಿಡಾರ ಹೂಡಿದ್ದೇವೆ. ತಿಂಗಳಿಗೆ ಬೇಕಾಗುಷ್ಟು ದಿನಸಿ ಆಹಾರ, ಬೇಳೆ ಕಾಳು, ಅಕ್ಕಿ, ಜೋಳ, ಎಣ್ಣೆ, ಗೋಧಿ ಹಾಗೂ ಸಾಮಾನುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಸಿದ್ದಪ್ಪ ಆದಮ್ಮನವರ, ವಿಜಯಕುಮಾರ ಹಾದಿಮನಿ, ಉಮೇಶ ಕದಡಿ, ಇತರರು.
ಊರಲ್ಲಿ ಮನೆ ಹೊರಗೆ ಬಾರದಂಥ ಪರಿಸ್ಥಿತಿ ಇದೆ. ಕರೊನಾ ಸೋಂಕು ಹರಡುವಿಕೆಯ ಭೀತಿಯಿಂದ ನಾವು ಕುಟುಂಬ ಸಮೇತ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಸ್ವಲ್ಪ ದಿನಗಳವರೆಗೆ ಕಾಲ ಅಲ್ಲೇ ಇರಲಿ ನಿರ್ಧರಿಸಿದ್ದೇವೆ.| ಅಶೋಕ ಕಟ್ಟಿಗಿ, ಡಂಬಳ ಗ್ರಾಮಸ್ಥ
EndFragment