ಕರೊನಾ ಕಾಟ ಸಂಪಾದನೆ ಇಲ್ಲದೆ ಅರ್ಚಕರ ಪರದಾಟ: ಜೀವನ ನಿರ್ವಹಣೆಯೇ ಕಷ್ಟನೆ

Corona
Published on

ಉಡುಪಿ: ಲಾಕ್​ಡೌನ್ ಪರಿಣಾಮ ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಯ ಬಿ ಮತ್ತು ಸಿ ಗ್ರೇಡ್ ದೇವಾಲಯಗಳ ಅರ್ಚಕರು, ಸಹಾಯಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಈ ಬಾರಿ ತಸ್ತೀಕ್ ಹೆಚ್ಚಳಕ್ಕೆ ಚಿಂತನೆ ನಡೆಸಿದೆ.

ಎ ಗ್ರೇಡ್ ದೇವಾಲಯಗಳಲ್ಲಿ ಅರ್ಚಕರಿಗೆ ಸಂಬಳ ಹೆಚ್ಚಿಲ್ಲದಿದ್ದರೂ ಸೇವಾ ಕಮಿಷನ್ ರೂಪದಲ್ಲಿ ಉತ್ತಮ ಸಂಭಾವನೆ ದೊರೆಯುತ್ತದೆ. ಬಿ ಮತ್ತು ಸಿ ಗ್ರೇಡ್ ದೇವಸ್ಥಾನಗಳಲ್ಲಿ ಒಂದೊಂದು ತೆರನಾದ ಸಂಬಳ. ಎಲ್ಲೂ 4-5 ಸಾವಿರ ರೂ.ಗಿಂತ ಹೆಚ್ಚು ಸಂಭಾವನೆ ನೀಡುವುದಿಲ್ಲ.

ರಾಜ್ಯದಲ್ಲಿ 34,543 ದೇವಸ್ಥಾನಗಳು ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ವಾರ್ಷಿಕ 5 ಲಕ್ಷ ರೂ.ಗಿಂತ ಕಡಿಮೆ ಆದಾಯದ ಸಿ ಗ್ರೇಡ್ ದೇವಸ್ಥಾನಗಳು 34,229. 5ರಿಂದ 25 ಲಕ್ಷವರೆಗೆ ಆದಾಯವಿರುವ 154 ಬಿ ಗ್ರೇಡ್, 25 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ 160 ಎ ಗ್ರೇಡ್ ದೇವಸ್ಥಾನಗಳಿವೆ. ಶೇ.95 ಸಿ ಗ್ರೇಡ್ ದೇವಸ್ಥಾನಗಳಿರುವುದು ಗ್ರಾಮೀಣ ಪ್ರದೇಶದಲ್ಲಿ. ಪ್ರಸಕ್ತ ಸಿ ಗ್ರೇಡ್ ದೇವಸ್ಥಾನಕ್ಕೆ ವಾರ್ಷಿಕ 48 ಸಾವಿರ ರೂ. ತಸ್ತೀಕ್ ನೀಡಲಾಗುತ್ತಿದೆ. ಅಂದರೆ ತಿಂಗಳಿಗೆ ಸರಾಸರಿ 4 ಸಾವಿರ ರೂ. ಇದರಲ್ಲಿ ಎಣ್ಣೆ, ಬತ್ತಿ, ನೈವೇದ್ಯ ಅಕ್ಕಿ ಎಲ್ಲವೂ ಒಳಗೊಂಡಿದೆ. 3 ಹಂತಗಳಲ್ಲಿ ದೇವಸ್ಥಾನಕ್ಕೆ ತಸ್ತಿಕ್ ನೀಡಲಾಗುತ್ತಿದ್ದು, 2019-20ನೇ ಸಾಲಿನಲ್ಲಿ ಅನೇಕ ಜಿಲ್ಲೆಗಳಲ್ಲಿ ಕೇವಲ 1 ಕಂತು ಹಣ ಮಾತ್ರ ಪಾವತಿಯಾಗಿದೆ.

ದೇಶಪಾಂಡೆ ಪತ್ರ: ಮಾಜಿ ಸಚಿವ ಅರ್.ವಿ.ದೇಶಪಾಂಡೆ ಈಗಾಗಲೇ ಅರ್ಚಕರ ಸಮಸ್ಯೆ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ.

ಅರ್ಚಕ ಆತ್ಮಹತ್ಯೆ

ಮಂಗಳೂರು: ಧಾರ್ವಿುಕ ಸೇವೆಗಾಗಿ ಮುಂಬೈಗೆ ತೆರಳಿದ್ದ ಕಾರ್ಕಳ ಬೈಲೂರು ಎರ್ಲಪಾಡಿಯ ಕೃಷ್ಣ ಶಾಂತಿ(37) ಏ.14ರಂದು ಮುಂಬೈ ಉಪನಗರ ಕಾಂದಿವಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿನ ದುರ್ಗಾ ಪರಮೇಶ್ವರಿ ಮಂದಿರದ ಪ್ರಧಾನ ಅರ್ಚಕ ರಜೆಯಲ್ಲಿ ತೆರಳಿದ್ದ ಕಾರಣ ಕೃಷ್ಣ ಶಾಂತಿ ಅವರು ಕೆಲದಿನಗಳ ಸೇವೆಗಾಗಿ ಮುಂಬೈಗೆ ತೆರಳಿದ್ದರು. ಆದರೆ ಲಾಕ್​ಡೌನ್​ನಿಂದ ಅಲ್ಲಿಯೇ ಉಳಿಯುವುದು ಅನಿವಾರ್ಯವಾಯಿತು. ಏ.14ರಂದು ಲಾಕ್​ಡೌನ್ ತೆರವಾಗುವ ನಿರೀಕ್ಷೆಯಲ್ಲಿ ಅವರು ಊರಿಗೆ ಮರಳುವ ಸಿದ್ಧತೆ ನಡೆಸಿದ್ದರು ಆದರೆ ಲಾಕ್​ಡೌನ್ ಮುಂದುವರಿದ ಪರಿಣಾಮ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಜರಾಯಿ ಸಚಿವರ ಜತೆ ದೂರವಾಣಿ ಮೂಲಕ ಮಾತನಾಡಿದ್ದು, 2019-20ರ ಸಾಲಿನ ಬಾಕಿ ತಸ್ತಿಕ್ ಹಣ ಹಾಗೂ 6 ತಿಂಗಳ ವೇತನ ಬಿಡುಗಡೆ ಮಾಡುತ್ತೇನೆಂದು ಹೇಳಿದ್ದಾರೆ. ಅರ್ಚಕರಿಗೆ ದವಸ ಧಾನ್ಯಗಳ ಕಿಟ್ ನೀಡಲು ಕಾರ್ವಿುಕ ಸಚಿವರ ಜತೆ ರ್ಚಚಿಸುವುದಾಗಿ ತಿಳಿಸಿದ್ದಾರೆ. | ಡಾ.ಜಾನಕಿರಾಮ್ ಅಧ್ಯಕ್ಷ, ರಾಜ್ಯ ಧಾರ್ವಿುಕ ದತ್ತಿ ದೇವಾಲಯಗಳ ಆರ್ಚಕರ ಸಂಘ ಸರ್ಕಾರ ಅಸಂಘಟಿತ ಕಾರ್ವಿುಕರಿಗೆ ತಿಂಗಳಿಗೆ 1 ಸಾವಿರ ರೂ.ನಂತೆ 3 ತಿಂಗಳು ನೆರವು ನೀಡಲು ನಿರ್ಧರಿಸಿದೆ. ದತ್ತಿ ಇಲಾಖೆ ದೇವಸ್ಥಾನದ ಅರ್ಚಕರು, ಸಹಾಯಕರು ಈ ವ್ಯಾಪ್ತಿಗೆ ಸೇರಿಸಿಲ್ಲ. ಹೀಗಾಗಿ ಸಿ ಗ್ರೇಡ್ ದೇವಸ್ಥಾನಕ್ಕೆ ನೀಡುವ ತಸ್ತೀಕ್ ಹಣವನ್ನು ಸ್ವಲ್ಪ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. | ಕೋಟ ಶ್ರೀನಿವಾಸ ಪೂಜಾರಿ ಸಚಿವ

| ಗೋಪಾಲಕೃಷ್ಣ ಪಾದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net