ಕರೊನಾ, ಒಮಿಕ್ರಾನ್ ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಿ

11-01-rama-minister
Published on

ರಾಮನಗರ: ಕರೊನಾ ಮತ್ತು ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ತಕ್ಷಣವೇ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನೂತನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಚಿಕಿತ್ಸಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವರಿಗೆ ಸಿಬ್ಬಂದಿ ಕೊರತೆ ಬಗ್ಗೆ ಅಧಿಕಾರಗಳು ಗಮನ ಸೆಳೆದರು. ಕೂಡಲೇ ವೈದ್ಯಕೀಯ ಮತ್ತು ಆರೋಗ್ಯ ಆಯುಕ್ತರೊಂದಿಗೆ ಮಾತನಾಡಿದ ಸಚಿವರು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸದ್ಯಕ್ಕೆ ಆಸ್ಪತ್ರೆಯಲ್ಲಿ ಕರೊನಾ ಮತ್ತು ಒಮಿಕ್ರಾನ್ ಸೋಂಕು ಪತ್ತೆ ಪರೀಕ್ಷೆ ಸಂಖ್ಯೆಯನ್ನು ಹೆಚ್ಚು ಮಾಡಿ, ತ್ವರಿತ ಗತಿಯಲ್ಲಿ ಫಲಿತಾಂಶ ದೊರಕಿಸಿಕೊಂಡು, ಕೂಡಲೇ ಸೂಕ್ತ ಚಿಕಿತ್ಸೆ ಆರಂಭಿಸಬೇಕು. ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡು, ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಅವರು ಹೇಳಿದರು.

ಕರೊನಾ ಮತ್ತು ಒಮಿಕ್ರಾನ್ ಸೋಂಕು ತಡೆಯಲು ಮುನ್ನೆಚ್ಚರಿಕೆ ಮತ್ತು ಪರೀಕ್ಷೆಗಳೇ ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅಗತ್ಯ ಅರಿವು ಮೂಡಿಸಬೇಕು. ಮಿಕ್ಕಂತೆ, ಇದುವರೆಗೂ ಲಸಿಕೆ ಪಡೆಯದವರನ್ನು ಸಂಪರ್ಕಿಸಿ, ಲಸಿಕೆ ಹಾಕಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಮತ್ತು 15ರಿಂದ 18 ವರ್ಷಗಳ ಒಳಗಿನವರಿಗೆ ಲಸಿಕೆ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅಶ್ವತ್ಥನಾರಾಯಣ ಹೇಳಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯಕ್ಕೆ 66 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅರ್ಹರಿಗೆ ಲಸಿಕೆ ಹಾಕಿರುವುದರಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ, ಸೋಂಕಿತರ ಪ್ರಮಾಣ ಹೆಚ್ಚಾಗುವ ಸಂಭವ ಇರುವುದರಿಂದ ಹಾಸಿಗೆಗಳ ಸಾಮರ್ಥ್ಯವನ್ನು ಅದಕ್ಕೆ ತಕ್ಕಂತೆ ಕೂಡಲೇ ಹೆಚ್ಚಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ದೇಶದಲ್ಲಿ ಈಗಾಗಲೇ 150 ಕೋಟಿ ಡೋಸ್ ಲಸಿಕೆಗಳನ್ನು ಹಾಕಲಾಗಿದ್ದು, ರಾಜ್ಯದಲ್ಲಿ ಈ ಸಂಖ್ಯೆ 9 ಕೋಟಿಯನ್ನು ದಾಟಿದೆ. ಆದ್ದರಿಂದ ಸೋಂಕಿನ ವಿರುದ್ಧ ಪ್ರತಿರೋಧ ಶಕ್ತಿ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಮರೆಯುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್, ಡಿಎಲ್ಒ ಡಾ. ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net