ಕರೊನಾ ಎಲ್ಲೆಲ್ಲೂ ಜನವೋ ಜನ

3005Klb09
Published on

ಜಯತೀರ್ಥ ಪಾಟೀಲ ಕಲಬುರಗಿ
ಕರೊನಾ ಸೋಂಕು ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ಡೌನ್ 4ನೇ ಹಂತ ಮಗಿದು (31ನೇ ಮೇ ) ಇದೀಗ 5ನೇ ಹಂತಕ್ಕೆ ಕಾಲಿಡುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಭರ್ಜರಿ ಸಡಿಲಿಕೆಗೆ ಮುಂದಾಗಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಮಾರ್ಗಸೂಚಿ ಹೊರಡಿಸಿದೆ.
ಈ ಮೊದಲಿನ ಮಾರ್ಗಸೂಚಿ ಬಹುತೇಕ ಯಥಾವತ್ತಾಗಿ ಮುಂದುವರಿಯಲಿದ್ದು, ಅದರಲ್ಲಿ ಕೆಲವೊಂದನ್ನು ಬದಲಾವಣೆ ಮಾಡಲಾಗಿದೆ. ವಿಶೇಷವಾಗಿ ಭಾನುವಾರ ಪೂರ್ಣ ದಿನದ ಲಾಕ್ಡೌನ್ ಜಾರಿಯಲ್ಲಿರುವುದನ್ನು ಸಾರ್ವಜನಿಕರ ಕೋರಿಕೆ ಮೇರೆಗೆ ಈ ಆದೇಶದಲ್ಲಿ ಮಾರ್ಪಡಿಸಿ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಕರ್ಫ್ಯೂ ತೆರವುಗೊಳಿಸಿ ಆದೇಶಿಸಿದೆ. ರಾತ್ರಿ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ಕರ್ಫ್ಯೂ ಎಂದಿನಂತೆ ಮುಂದುವರಿಯಲಿದೆ.
ಭಾನುವಾರದ ಸರ್ಕಾರಿ ಕಚೇರಿಗಳಿಗೂ ರಜೆ ಇರುವುದರಿಂದ ಮಾರುಕಟ್ಟೆಗೆ ಧಾವಿಸುವ ಜನರ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಒಂದು ಮತ್ತು ಎರಡನೇ ಹಂತದಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ ಅನುಷ್ಠಾನ 3 ಮತ್ತು 4ರಲ್ಲಿ ಕಂಡುಬರಲಿಲ್ಲ. ಈಗಂತೂ 5ನೇ ಹಂತದ ಲಾಕ್ಡೌನ್ ಜಾರಿಯಾಗುತ್ತಿದ್ದು, ಸಡಿಲಿಕೆಯಲ್ಲಿ ಯಾವುದೇ ಚೌಕಾಶಿ ಕಂಡುಬಂದಿಲ್ಲ. ಹೀಗಾಗಿ ಜನ ಭಯಭೀತರಾಗಿದ್ದಾರೆ.
ಕ್ವಾರಂಟೈನ್ ಕ್ಲೀನ್: ಮಹಾರಾಷ್ಟ್ರದಿಂದ ಬಂದವರೂ ಸೇರಿದಂತೆ ಶಂಕಿತರನ್ನು ಸರ್ಕಾರ ಕ್ವಾರಂಟೈನ್ ಸೆಂಟರ್ಗಳಲ್ಲಿ ಹದಿನಾಲ್ಕು ದಿನಗಳ ಕಾಲ ಇರಿಸಿ, ಈ ಅವಧಿ ಪೂಣಣೊಂಡ ನಂತರ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಇನ್ನೂ 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚಿಸುತ್ತಿತ್ತು. ಆದರೆ ಇದೀಗ ಕ್ವಾರಂಟೈನ್ಲ್ಲಿದ್ದವರಲ್ಲಿ ಏಳು ದಿನದ ನಂತರ ಕೋವಿಡ್-19 ಲಕ್ಷಣ ಕಂಡುಬರದೇ ಇದ್ದಲ್ಲಿ ನೇರವಾಗಿ ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಹೀಗಾಗಿ ಸಾವಿರಾರು ಜನ ಮನೆ ಸೇರಿಯೂ ಆಗಿದೆ. ನೂರಾರು ಕ್ವಾರಂಟೈನ್ ಸೆಂಟರ್ಗಳನ್ನು ಕ್ಯಾನ್ಸಲ್ ಮಾಡಿದ್ದೂ ಆಗಿದೆ.
ಏಳು ದಿನದ ನಂತರ ಕ್ವಾರಂಟೈನ್ ಸೆಂಟರ್ನಿಂದ ಮನೆಗೆ ಹೋಗುವ ಈ ಮಂದಿಗೆ ಸೋಂಕು ಬರುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ? ಹಾಗೊಂದು ವೇಳೆ ಸೋಂಕು ಹರಡಿ ಅವರು ಹೊರಗಡೆ ತಿರುಗಾಡಿದರೆ ಸಮುದಾಯದತ್ತ ವ್ಯಾಪಿಸುವ ಸಾಧ್ಯತೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿ: ತಿಂಗಳುಗಟ್ಟಲೆ ಲಾಕ್ಡೌನ್ ಹಾಕಿದರೂ ಕಷ್ಟ. ಹಾಕದಿದ್ದರೂ ಕಷ್ಟ. 2-3 ತಿಂಗಳ ಲಾಕ್ಡೌನ್ ಅವಧಿಯಲ್ಲಿ ಬಡವರು, ಕೂಲಿ ಕಾರ್ಮಿಕರು, ಗುತ್ತಿಗೆ ನೌಕರರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸದವರು, ಬಿಕ್ಷುಕರು, ನಿರ್ಗತಿಕರು ಹೀಗೆ ಅನೇಕ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದಾರೆ. ಕೈಗಾರಿಕೆಗಳು, ಬೇಳೆ ಕಾರ್ಖಾನೆಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಮಾಲಿಕರು ಮತ್ತು ಕಾರ್ಮಿಕರು ನಾನಾ ಹಂತದ ತೊಂದರೆ ಎದುರಿಸಿಯೂ ಆಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೆಚ್ಚಿನ ಸಡಿಲಿಕೆ ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ತಮ್ಮ ತಮ್ಮ ಸಂರಕ್ಷಣೆ ತಾವೇ ಖುದ್ದಾಗಿ ಮಾಡಿಕೊಳ್ಳಬೇಕಾದ ಜರೂರಿ ಎದುರಾಗಿದೆ.
ದೈಹಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಬಳಕೆ ಮಾಡಲೇಬೇಕು, ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು, ಮೇಲಿಂದ ಮೇಲೆ ಕೈತೊಳೆದುಕೊಳ್ಳಬೇಕು. ಗುಂಪು, ಗುಂಪಾಗಿ ಇರಬಾರದು. ಸಾಧ್ಯವಾದಷ್ಟು ಸಭೆ, ಸಮಾರಂಭಗಳನ್ನು ಅವೈಡ್ ಮಾಡಬೇಕು. ಇಂತಹ ಸರಳೋಪಾಯ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸಧ್ಯದ ಜರೂರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net