ಕರೊನಾ ಎರಡನೇ ಅಲೆ ಭೀತಿ!

corona virus2
Published on

ಮೈಸೂರು: ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆಯ ಮುನ್ಸೂಚನೆ ದೊರೆತಿದ್ದು, ಕೋವಿಡ್ ಮಾರ್ಗಸೂಚಿ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ.
ಕರೊನಾ ಕಾಟ ಮುಗಿಯಿತು ಎಂದು ಭಾವಿಸಿರುವ ಜನಸಾಮಾನ್ಯರು ಯಥಾಸ್ಥಿತಿ ಜೀವನ ನಡೆಸುತ್ತಿದ್ದಾರೆ. ಮಾಸ್ಕ್ ಕೈಬಿಟ್ಟು ಗುಂಪುಗೂಡುತ್ತಿದ್ದಾರೆ. ಆದರೀಗ ಮತ್ತೆ ಕರೊನಾ 2ನೇ ಅಲೆ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಕರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸೋಂಕು ಪತ್ತೆಗೆ ಪರೀಕ್ಷೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ. ಹಿಂದೆ ಪ್ರತಿದಿನ 3 ಸಾವಿರ ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ 5 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
‘ಈ ಮೊದಲನಿಂದಲೇ ಮಾಸ್ಕ್, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸ್ಯಾನಿಟೈಸರ್ ಬಳಕೆಗೆ ಒತ್ತು ನೀಡಲು ಸಾರ್ವಜನಿಕರಿಗೆ ಸೂಚಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ತಿಳಿಸಿದರು.
‘ಕೋವಿಡ್ ಸೋಂಕು ಮತ್ತೆ ಹೆಚ್ಚುತ್ತಿರುವುದರಿಂದ ಮಾ.17ರಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿಗಳು, ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾರ್ಗಸೂಚಿ ಬರುವ ನಿರೀಕ್ಷೆ ಬರಲಿದ್ದು, ಆ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹತೋಟಿಯಲ್ಲಿ ಇತ್ತು. ಈಗ ಮತ್ತೆ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ, ಮದುವೆ, ಜಾತ್ರೆಯಲ್ಲಿ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮದುವೆಗೆ 500 ಜನ, ಶವಸಂಸ್ಕಾರಕ್ಕೆ 200ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಕರೊನಾ ವೈರಸ್ ಸೋಂಕನ್ನು ನಿಯಂತ್ರಿಸಬೇಕಾದರೆ ಸಾರ್ವಜನಿಕರು ಸರ್ಕಾರದ ನಿಯಮ ಪಾಲಿಸಬೇಕು ಎಂದು ತಿಳಿಸಿದ್ದಾರೆ.
58 ಜನರಿಗೆ ಸೋಂಕು ದೃಢ
ಜಿಲ್ಲೆಯಲ್ಲೂ ಕೋವಿಡ್ ಪ್ರಕರಣ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಮಂಗಳವಾರ 58 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.
ಸೋಂಕಿತರ ಸಂಪರ್ಕದಿಂದಾಗಿ 58 ಜನರಿಗೆ ರೋಗ ಹರಡಿದೆ. ತೀವ್ರ ಶೀತಜ್ವರ ಮಾದರಿ(ಐಎಲ್‌ಐ) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 10 ಜನರು, ತೀವ್ರ ಉಸಿರಾಟ ಸಮಸ್ಯೆಯನ್ನು (ಎಸ್‌ಐಆರ್‌ಐ) ಹೊಂದಿದ್ದ 6 ಜನರಿಗೂ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 262ಕ್ಕೆ ಏರಿಕೆಯಾಗಿದೆ. ಇಲ್ಲಿ ವರೆಗೆ 54,549 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 53,249 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಬಳುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ಕೋವಿಡ್ ಮೃತರ ಸಂಖ್ಯೆ 1038ಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net