

ಕೋಲಾರ: ಹಲವು ದೇಶಗಳಿಗೆ ವ್ಯಾಪಿಸಿರುವ ಕರೊನಾ ಭಾರತದಲ್ಲೂ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.
6 ಹಾಸಿಗೆಗಳ ವಾರ್ಡ್ ಜತೆಗೆ, ತಪಾಸಣೆ, ರಕ್ತ ಪರೀಕ್ಷೆ, ವೈರಸ್ ಪತ್ತೆ ಹಚ್ಚಲು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ. ಕರೊನಾ ವೈರಸ್ ಕಂಡುಬಂದಲ್ಲಿ ರೋಗಿಯ ರಕ್ತ ಮಾದರಿ ಪಡೆದು ಬೆಂಗಳೂರಿನ ವೈರಲಾಜಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ತಂಡವನ್ನು ಸನ್ನದ್ಧಗೊಳಿಸಲಾಗಿದೆ.
ರೋಗಿಗಳಿಗೆ ಪ್ರತ್ಯೇಕ ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಸಮಸ್ಯೆ ಕಂಡು ಬಂದಾಗ ಪರಿಸ್ಥಿತಿ ಎದುರಿಸಲು ಐಸಿಯು ವಾರ್ಡ್‌ನಲ್ಲಿ 5 ಹಾಸಿಗೆಗಳಲ್ಲಿ ಒಂದು ಹಾಸಿಗೆ ಮೀಸಲಿರಿಸಲಾಗಿದೆ.
ಚೀನಾದಲ್ಲಿ ಕರೊನಾ ವೈರಸ್ ಪತ್ತೆಯಾಗುವ ಮುನ್ನ ಅಲ್ಲಿಂದ ಕೋಲಾರದ ನರಸಾಪುರದ ಮೊಬೈಲ್ ಕಂಪನಿಯೊಂದರ ಘಟಕ ಸ್ಥಾಪನೆ ಸಂಬಂಧ ತಂಡವೊಂದು ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದರಲ್ಲದೆ 28 ದಿನ ನಿಗಾವಹಿಸಿದ್ದರು. ಚೀನಾದಲ್ಲಿ ನೆಲೆಸಿದ್ದ ಎಲ್ಲ ಭಾರತೀಯರನ್ನು ಕೇಂದ್ರ ಸರ್ಕಾರ ಸ್ವದೇಶಕ್ಕೆ ಕರೆಸಿಕೊಂಡ ಸಂದರ್ಭದಲ್ಲಿ ತಂಡದಲ್ಲಿದ್ದ ಕೋಲಾರದ ಐದು ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ನಿಗಾ ಇಡಲಾಗಿತ್ತು. ಸದ್ಯಕ್ಕೆ ಜಿಲ್ಲೆಯಲ್ಲಿ ಆತಂಕ ಇಲ್ಲ.
ಜಿಲ್ಲೆಯಲ್ಲಿ ಇದುವರೆಗೆ ಶಂಕಿತರು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿರುವ ರೈಲ್ವೆ ನಿಲ್ದಾಣ ಹಾಗೂ ಆಂಧ್ರ ಮತ್ತು ತಮಿಳುನಾಡಿನ ಗಡಿಭಾಗಗಳಿಂದ ಬರುವ ಜನರ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಡಾ.ಎಸ್.ಜಿ. ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಕೋಲಾರ ಕರೊನಾ ಬಗ್ಗೆ ಗ್ರಾಪಂ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸುವಂತೆ ಪಿಡಿಒ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಗ್ರಾಮಗಳಲ್ಲಿ ಸ್ವಚ್ಛತಾ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಲಾಗಿದೆ. ಸಿ.ಎಸ್. ವೆಂಕಟೇಶ್, ಜಿಪಂ ಅಧ್ಯಕ್ಷ, ಕೋಲಾರ