ಕರೊನಾ 3ನೇ ಅಲೆ ಎದುರಿಸಲು ಸಜ್ಜು, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ, ಅನಾರೋಗ್ಯಪೀಡಿತ ಮಕ್ಕಳಿಗೆ ವಿಶೇಷ ಚಿಕಿತ್ಸೆಗೆ ಚಾಲನೆ

3
Published on

ಹೊಸಕೋಟೆ: ಕರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿರಾಗುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತ ತಾಲೂಕಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ನಗರದ ಎಂವಿಜೆ ಆಸ್ಪತ್ರೆಯಲ್ಲಿ ಅಪೌಷ್ಟಿಕತೆ, ಹೃದ್ರೋಗ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಚಿಕಿತ್ಸೆ ಕಾರ್ಯಕ್ರಮನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಕೆಲವು ದಿನಗಳಿಂದ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಮಕ್ಕಳ ತಜ್ಞರು ತೆರಳಿ, ತಪಾಸಣೆ ನಡೆಸಿ ಕೆಲವು ಕಾಯಿಲೆಗಳಿಗೆ ಸ್ಥಳದಲ್ಲೇ ಆರೈಕೆ ಹಾಗೂ ಚಿಕಿತ್ಸೆ ನೀಡಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಹಾಗೂ ಮೂತ್ರಪಿಂಡ ಸಮಸ್ಯೆಗಳು ಹೊಂದಿರುವ ಮಕ್ಕಳ ಚಿಕಿತ್ಸೆಗೆ ಎಂವಿಜೆ ಆಸ್ಪತ್ರೆಯ ಸಹಯೋಗ ಪಡೆದುಕೊಳ್ಳಲಾಗಿದೆ ಎಂದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈಗಾಗಲೇ ಪೌಷ್ಟಿಕ ಆಹಾರ, ಬಾದಾಮಿ ಹಾಲಿನ ಪುಡಿ ನೀಡಲಾಗಿದೆ. ಜತೆಯಲ್ಲಿ ಪಾಲಕರು ಕೂಡ ಮಕ್ಕಳಿಗೆ ಸಾದ್ಯವಾದಷ್ಟು ಪೌಷ್ಟಿಕ ಆಹಾರ ನೀಡಬೇಕು, ಮಕ್ಕಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಆಶಾ ಕಾರ್ಯಕರ್ತೆಯರು ಮಕ್ಕಳ ರಕ್ಷಣೆ ಕುರಿತು ಪಾಲರಿಗೆ ತರಬೇತಿ ನೀಡಬೇಕು ಎಂದು ಸಲಹೆ ನಿಡಿದರು.

ಕೊರೊನಾ ಸಂದರ್ಭದಲ್ಲಿ ಎಂವಿಜೆ ಆಸ್ಪತ್ರೆಯು ಸರ್ಕಾರಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದೆ. ಹಳ್ಳಿಗಳಿಗೆ ಮಕ್ಕಳ ತಜ್ಞರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

61,412 ಮಕ್ಕಳ ತಪಾಸಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1,075 ಗ್ರಾಮಗಳಿಗೆ 20 ಮಕ್ಕಳ ತಜ್ಞರ ತಂಡ ತೆರಳಿ ತಪಾಸಣೆ ನಡೆಸಿದೆ. ಈಗಾಗಲೇ 61,412 ಮಕ್ಕಳನ್ನು ತಪಾಸಣೆ ಮಾಡಿದ್ದು, ಅವರಲ್ಲಿ 2,659 ಮಕ್ಕಳು ಅಪೌಷ್ಟಿಕತೆಯಿಂದ, 141 ಮಕ್ಕಳು ಹೃದಯ ಸಂಬಂಧಿ ಕಾಯಿಲೆಯಿಂದ, 77 ಮಕ್ಕಳು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ, 3,200 ಮಕ್ಕಳು ರಕ್ತಹೀನತೆಯಿಂದ, 19 ಮಕ್ಕಳು ಮೂತ್ರಪಿಂಡ ಸಮಸ್ಯೆಯಿಂದ ಹಾಗೂ 132 ಮಕ್ಕಳು ಜನ್ಮತಃ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಗುರುತಿಸಲಾಗಿದೆ. ಅವರಲ್ಲಿ ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಗುವುದು ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ಕಾರ್ಯನಿರ್ವಹಣಾಧಿಕಾರಿ ಡಾ. ಪ್ರಮೋದ್, ತಜ್ಞ ವೈದ್ಯರಾದ ದಯಾನಂದ್, ಯಶವಂತ್, ತಾಲೂಕು ಹಿರಿಯ ಆರೋಗ್ಯನಿರೀಕ್ಷಕ ಗುರುರಾಜ್, ನಗರಸಭೆ ಸದಸ್ಯ ಅರುಣ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net