

ಚಾಮರಾಜನಗರ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ವಿದ್ಯುತ್ ಅವಘಡಗಳಲ್ಲಿ ಜನ-ಜಾನುವಾರುಗಳು ಬಲಿಯಾಗುತ್ತಲೇ ಇವೆ. ಮಳೆಯ ಹೊಡೆತದಿಂದಾಗಿ ಇದೊಂದೇ ತಿಂಗಳಲ್ಲಿ ಕರೆಂಟ್ ಶಾಕ್‌ನಿಂದ ನಾಲ್ವರು ಜೀವ ತೆತ್ತಿರುವುದು ಆತಂಕ ಮೂಡಿಸಿದೆ.
ಅ.15ರಂದು ತಾಲೂಕಿನ ಕೋಡಿಮೋಳೆ ಬಸವನಪುರ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ಮಾದಪ್ಪ ಮಳೆಯಿಂದ ರಕ್ಷಣೆ ಪಡೆಯಲು ತೊಂಬೆ ಬಳಿ ಹೋಗಿ ಕರೆಂಟ್ ಶಾಕ್‌ನಿಂದ ಮೃತಪಟ್ಟರು. ಅ.24ರಂದು ಬಾಗಳಿ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ನೀರು ಬಿಡಲು ಹೋಗಿ ಕೊಳವೆಬಾವಿ ಸ್ಟಾರ್ಟರ್ ಶಾರ್ಟ್ ಸರ್ಕ್ಯೂಟ್ ಆಗಿ ಮಹದೇವ್(21) ಮೃತಪಟ್ಟನು. ಬುಧವಾರ ರಾತ್ರಿ ಅಯ್ಯನಪುರ ಗ್ರಾಮದಲ್ಲಿ ಮಲ್ಲೇಶ್(48) ಮತ್ತು ನಾಗೇಂದ್ರ(40) ಭೀಕರವಾಗಿ ಸಾವಿಗೀಡಾಗಿದ್ದಾರೆ. ಹೀಗೆ ಒಂದೇ ತಿಂಗಳಲ್ಲಿ ನಾಲ್ವರ ಸಾವು ಸಂಭವಿಸಿರುವುದು ಮಾತ್ರವಲ್ಲ ಹಿಂದಿನ ವರ್ಷಗಳಲ್ಲೂ ಕರೆಂಟ್ ಶಾಕ್‌ಗೆ ಜೀವಗಳು ಲಾಕ್ ಆಗಿ ಉಸಿರು ಚೆಲ್ಲಿವೆ.
ಜನ-ಜಾನುವಾರುಗಳ ಬಲಿ: ವಿದ್ಯುತ್ ಸ್ಪರ್ಶದಿಂದ ಜನ-ಜಾನುವಾರುಗಳು ಬಲಿಯಾಗಿದ್ದು, 2022ರಿಂದ ಈವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ಭೀತಿ ಹೆಚ್ಚಾಗುತ್ತದೆ. ಚಾಮರಾಜನಗರ ಉಪ ವಿಭಾಗದ ಉಪ ವಿದ್ಯುತ್ ಪರಿವೀಕ್ಷಕರ ಕಚೇರಿ ನೀಡಿರುವ ಮಾಹಿತಿ ಪ್ರಕಾರ, 2022-23ನೇ ಸಾಲಿನಲ್ಲಿ ವಿದ್ಯುತ್ ಅವಘಡದಿಂದ 6 ಜನ ಮರಣ ಹೊಂದಿದರು. 9 ಜಾನುವಾರುಗಳು ಸತ್ತವು. 2023-24ನೇ ಸಾಲಿನಲ್ಲಿ ಇಬ್ಬರು ಮೃತಪಟ್ಟರು, 7 ಜಾನುವಾರುಗಳು ಬಲಿಯಾದವು. 2024ರ ಏಪ್ರಿಲ್‌ನಿಂದ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. 7 ಸಾಕುಪ್ರಾಣಿಗಳು ಸತ್ತಿವೆ. ಮೃತರಾದವರಿಗೆ ಪರಿಹಾರವನ್ನು ನೀಡಲಾಗಿದೆ.
ಪ್ರಾಣ ಕಳೆದುಕೊಳ್ಳುತ್ತಿರುವ ರೈತರು: ವಿದ್ಯುತ್ ಅವಘಡಗಳಲ್ಲಿ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ. ಜಮೀನುಗಳಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿರುತ್ತವೆ. ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸಿರುವುದಿಲ್ಲ, ವಿದ್ಯುತ್ ಕಂಬಗಳ ಮೇಲೆ ಬಳ್ಳಿ ಬೆಳೆದುಕೊಂಡಿರುತ್ತವೆ. ವಿದ್ಯುತ್ ಪ್ರವರ್ತಕ ಮತ್ತು ತೊಂಬೆ ಬಳಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಇದನ್ನು ಸಕಾಲದಲ್ಲಿ ಪರಿಶೀಲಿಸುವುದಿಲ್ಲ ಎಂಬ ದೂರುಗಳಿವೆ. ಹೀಗಾಗಿ ಜಮೀನುಗಳಿಗೆ ಕೆಲಸಕ್ಕೆ ಹೋಗುವ ರೈತರು ವಿದ್ಯುತ್ ಸ್ಪರ್ಶದಿಂದ ಸಾಯುತ್ತಿದ್ದಾರೆ ಎಂದು ರೈತರ ಮುಖಂಡರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಅಪಾಯಕ್ಕೆ ಆಹ್ವಾನಿಸುವ ಮಳೆ
ಮಳೆ ಬೀಳುವ ಸಂದರ್ಭದಲ್ಲೇ ಹೆಚ್ಚು ವಿದ್ಯುತ್ ಅವಘಡಗಳು ಸಂಭವಿಸಿರುವುದು. ಮಳೆಗಾಲದಲ್ಲಿ ವಿದ್ಯುತ್ ಸ್ಪರ್ಶದಿಂದ ಅನಾಹುತಗಳು ಹೆಚ್ಚಾಗುತ್ತಿವೆ. ಮಳೆಗಾಲಕ್ಕೂ ಮೊದಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಗತ್ಯ ಸಿದ್ಧತೆ ಕೈಗೊಳ್ಳಬೇಕಾಗುತ್ತದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳಲ್ಲಿ ಗಮನಿಸಿದರೆ ಹಳೆಯ ವಿದ್ಯುತ್ ಕಂಬಗಳು, ಸಡಿಲವಾಗಿರುವ ತಂತಿಗಳು, ಗಿಡಗಂಟಿ ಬಳ್ಳಿ ಬೆಳೆದುಕೊಂಡಿರುವ ವಿದ್ಯುತ್ ಕಂಬಗಳು ಕಾಣುತ್ತವೆ.
ರೈತರೇ ಸುರಕ್ಷತೆಗೆ ಆದ್ಯತೆ ನೀಡಿ:
*ತುಂಡಾಗಿರುವ ವಿದ್ಯುತ್ ತಂತಿಯಿಂದ ಕನಿಷ್ಠ 10 ಮೀಟರ್ ಅಂತರದಲ್ಲಿ ನಿಲ್ಲಿ
*ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬೇಡಿ
*ತಂತಿ ಬೇಲಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯಿಂದ ನೇರವಾಗಿ ವಿದ್ಯುತ್ ಸಂಪರ್ಕ ನೀಡಬೇಡಿ.
*ವಿದ್ಯುತ್ ತಂತಿಯ ಎತ್ತರಕ್ಕೆ ಎತ್ತಿನಗಾಡಿ, ಟ್ರಾೃಕ್ಟರ್‌ನಲ್ಲಿ ಕಬ್ಬು ತುಂಬಬೇಡಿ
*ಮಳೆ, ಜೋರು ಗಾಳಿ ಬಂದ ಸಂದರ್ಭದಲ್ಲಿ ಜಮೀನುಗಳಿಗೆ ಹೋದಾಗ ಎಚ್ಚರಿಕೆ ವಹಿಸಿ
ಜೀವಗಳಿಗೆ ಬೆಲೆ ಕಟ್ಟಲಾಗದು ವಿದ್ಯುತ್ ಅವಘಡಗಳು ಕೃಷಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿವೆ. ಒಂದೆಡೆ ರೈತರು ಮೃತಪಟ್ಟರೆ ಮತ್ತೊಂದೆಡೆ ಜಾನುವಾರುಗಳು ಸಾಯುತ್ತಿವೆ. ಕೃಷಿ ಕೆಲಸಕ್ಕೆ ಹೋದಾಗ ಸಾಯುವ ರೈತರಿಗೂ ಕುಟುಂಬಗಳಿವೆ. ರೈತರನ್ನೇ ನಂಬಿ ಬದುಕುವ ಮನೆಯವರಿಗೆ ಎಷ್ಟೇ ಪರಿಹಾರವನ್ನು ಕೊಟ್ಟರೂ ಹೋದ ಜೀವವನ್ನು ಮರಳಿ ತಂದುಕೊಡಲು ಆಗುವುದಿಲ್ಲ. ಹೀಗಾಗಿ ಜೀವಗಳಿಗೆ ಬೆಲೆ ಕಟ್ಟಲಾಗದು. ರೈತರು ಸಾಕಿರುವ ಹಸು, ಎಮ್ಮೆ, ಮೇಕೆ ಸೇರಿದಂತೆ ಇತರ ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದೂ ಉಂಟು. ಹೀಗಾಗಿ ರೈತರು ಕೃಷಿ ಮಾಡಲು ಎದುರಾಗುವ ತೊಡಕುಗಳಲ್ಲಿ ವಿದ್ಯುತ್ ಅವಘಡವೂ ಒಂದಾಗಿದೆ.
ಕಾಡುಪ್ರಾಣಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರೆ ರೈತರ ಮೇಲೆ ಕೇಸ್ ಹಾಕುತ್ತಾರೆ. ಅದೇ ರೈತ ಕರೆಂಟ್ ಶಾಕ್‌ನಿಂದ ಸತ್ತರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು. ವಿದ್ಯುತ್ ಮಾರ್ಗಗಳನ್ನು ನೋಡಿಕೊಳ್ಳುವ ಕೆಲಸವನ್ನು ರೈತರು ಮಾಡಲಾಗುತ್ತಾ? ಎಲ್ಲದಕ್ಕೂ ರೈತರೇ ಅರ್ಜಿ ಕೊಡಬೇಕು. ಅಧಿಕಾರಿಗಳು ಕೆಲಸವನ್ನು ಉಡಾೆಯಿಂದ ಮಾಡುವುದರಿಂದಲೇ ಅವಘಡಗಳು ಸಂಭವಿಸುತ್ತಿವೆ. ಇಂತಹ ಅಧಿಕಾರಿಗಳು ಮನೆಗೆ ಹೋಗಬೇಕು, ಇಲ್ಲವೇ ನಾವೇ ಅವರನ್ನು ಮನೆಗೆ ಕಳುಹಿಸುತ್ತೇವೆ. ಹೊನ್ನೂರು ಪ್ರಕಾಶ್, ರೈತ ನಾಯಕ, ಚಾಮರಾಜನಗರ ವಿದ್ಯುತ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಮಳೆ ಸಂದರ್ಭದಲ್ಲೇ ವಿದ್ಯುತ್ ಅವಘಡಗಳು ಸಂಭವಿಸುವುದು ಹೆಚ್ಚು. ಅನಾಹುತ ಸಂಭವಿಸದಿರಲು ಮತ್ತಷ್ಟು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ನಷ್ಟು ನಿರ್ವಹಣೆಯಲ್ಲಿ ತೊಡಗಿಕೊಳ್ಳಲಾಗುವುದು. ಟಿ.ಪ್ರದೀಪ್, ಕಾರ್ಯಪಾಲಕ ಇಂಜಿನಿಯರ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಚಾಮರಾಜನಗರ