ಕರೂರು, ಭಾರಂಗಿ ಹೋಬಳಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ; ಉಚಿತ ದೂರಸಂಪರ್ಕ ಸೌಲಭ್ಯ

SGR WEEEB
Published on

ಸಾಗರ: ಶರಾವತಿ ಕಣಿವೆಯ ಕರೂರು ಮತ್ತು ಭಾರಂಗಿ ಹೋಬಳಿ ಜನತೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಶನಿವಾರ ನಗರದಲ್ಲಿ ಬಿಎಸ್‌ಎನ್‌ಎಲ್ ಉನ್ನತ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಅಧಿಕಾರಿಗಳ ಸಭೆ ಜತೆ ನಡೆಸಿ ಮಾತನಾಡಿ, ಉಚಿತವಾಗಿ ಗ್ರಾಮೀಣ ಭಾಗಕ್ಕೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಹೈಸ್ಪೀಡ್ ಇಂಟರ್‌ನೆಟ್ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆ ಅಡಿ ಸಂಪರ್ಕ ಪಡೆಯಲು ಯಾವುದೇ ವೆಚ್ಚ ಇರುವುದಿಲ್ಲ. ಮೋಡಮ್ ಸಹ ಉಚಿತವಾಗಿ ನೀಡಲಾಗುತ್ತಿದೆ. ಮೊದಲ ಎರಡೂವರೆ ತಿಂಗಳು ಪ್ರತಿ ತಿಂಗಳಿಗೆ 110 ರೂಪಾಯಿಯಂತೆ ಶುಲ್ಕ ವಿಧಿಸಲಾಗುತ್ತದೆ ಎಂದರು.

2018ರಿಂದಲೂ ಕರೂರು, ಭಾರಂಗಿ ಭಾಗಕ್ಕೆ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿತ್ತು. ಈಗ ತಾಲೂಕನ್ನು ಪೈಲಟ್ ಪ್ರಾಜೆಕ್ಟ್‌ನಡಿ ಸೇರಿಸುವಲ್ಲಿ ಬಿ.ವೈ.ರಾಘವೇಂದ್ರ ಶ್ರಮಿಸಿದ್ದಾರೆ. ತಾಲೂಕಿನಲ್ಲಿ ಮೊಬೈಲ್ ಸಿಗ್ನಲ್ ಇಲ್ಲದ ಕಡೆ 36 ಟವರ್ ಸಹ ಮಂಜೂರಾಗಿದ್ದು, ಅದನ್ನು ಶೀಘ್ರದಲ್ಲಿಯೆ ಅಳವಡಿಸಲಾಗುತ್ತಿದೆ. ಜತೆಗೆ 2023ರ ಡಿಸೆಂಬರ್ ಒಳಗೆ ಈ ಎಲ್ಲ ಪ್ರದೇಶಕ್ಕೆ 4ಜಿ ಸೇವೆ ಪ್ರಾರಂಭಿಸಲು ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.

ಈ ಹಿಂದೆ ಶರಾವತಿ ಕಣಿವೆಯ ಜನರು ನೋ ನೆಟ್‌ವರ್ಕ್, ನೋ ಓಟ್ ಎಂಬ ಅಭಿಯಾನ ಆರಂಭಿಸಿದ್ದರು. ಇದೀಗ ಅವರ ಹೋರಾಟಕ್ಕೆ ಜಯ ಸಿಕ್ಕಂತೆ ಆಗಿದೆ. ಇಂಟರ್‌ನೆಟ್ ಸೌಲಭ್ಯ ಬೇಕಾದವರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು. ನವೆಂಬರ್ 30ರೊಳಗೆ ಅಂತ್ಯದೊಳಗೆ ಜನರು ಅರ್ಜಿ ಸಲ್ಲಿಸಿ ನೆಟ್‌ವರ್ಕ್ ಪಡೆಯಬೇಕು ಎಂಬ ನಿಯಮವಿದೆ. ದಿನಾಂಕವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಹ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net