ಕರುವಿನ ಮೇಲೆ ಚಿರತೆ ದಾಳಿ

aluru
Published on
ಆಲೂರು: ತಾಲ್ಲೂಕಿನ ಕುಂದೂರು ಹೋಬಳಿ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಣಿವೆ ಬಸವನಹಳ್ಳಿ ಗ್ರಾಮದ ಬಿ ಆರ್ ಶಿವಪ್ಪ ಬಿನ್ ರಾಜಪ್ಪ ಎಂಬುವರು ಪ್ರತಿನಿತ್ಯದಂತೆ ಗುರುವಾರ ಕೂಡ ದನಕರುಗಳನ್ನು ಮಾದಿಹಳ್ಳಿ, ರಂಗನಾಥಸ್ವಾಮಿ ಬೆಟ್ಟದ ಕಡೆ ಮೇವಿಗಾಗಿ ಹೊಡೆದುಕೊಂಡು ಹೋಗಿ ಗುರುವಾರ ಸಂಜೆ ಪುನಃ ದನಕರುಗಳನ್ನು ಹೊಡೆದುಕೊಂಡು ಮನೆಗೆ ಹಿಂದಿರುಗಿದ್ದಾರೆ. ಹಿಂದಿರುಗಿದಾಗ  3 ವರ್ಷದ ಕರು ಕಾಣದೇ ಇದ್ದಾಗ ಶುಕ್ರವಾರ ಬೆಳಗ್ಗೆ ದನ ಮೇಯಿಸಲು ಹೋಗಿದ್ದ ಸ್ಥಳಗಳಲ್ಲಿ  ಹುಡುಕಾಡಿದಾಗ ಯಾವುದೋ ಪ್ರಾಣಿ ದಾಳಿ ಮಾಡಿ ತಿಂದು ಬಿಟ್ಟಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿರುತ್ತಾರೆ.
ವಿಷಯ ತಿಳಿದ ವಲಯ ಅರಣ್ಯ ಅಧಿಕಾರಿ ಎಚ್ ಕೆ ಮರಿಸ್ವಾಮಿ, ಸಿಬ್ಬಂದಿಗಳಾದ ಪ್ರದೀಪ್ ಕುಮಾರ್ ಹಾಗೂ ಜಯಪಾಲ್ ಅವರ ಸಹಕಾರದಿಂದ  ಸ್ಥಳ ಪರಿಶೀಲನೆ ನಡೆಸಿದಾಗ ಕರುವಿನ ಕುತ್ತಿಗೆಯ ಭಾಗದಲ್ಲಿ ಚಿರತೆಯ ಹಲ್ಲುಗಳ  ಹಾಗೂ ಕಾಲುಗಳ ಉಗುರಿನಿಂದ ಪರಚಿರುವುದು ಕಂಡು ಬಂದಿದ್ದು, ನಂತರ ಕರುವಿನ ಮರಣೋತ್ತರ ಪರೀಕ್ಷೆಗಾಗಿ ರಾಯರಕೊಪ್ಪಲಿನ ಪಶು ವೈದ್ಯಾಧಿಕಾರಿಗಳಾದ ಡಾ!! ಅನಿಲ್ ಅವರಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು , ಮುನ್ನೆಚ್ಚರಿಕಾ ಕ್ರಮವಾಗಿ ಮಾದಿಹಳ್ಳಿ ಭಾಗದಲ್ಲಿ  ಚಿರತೆಯ ಬೋನನ್ನು ಇಡಲಾಗಿದೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಜಮೀನು ಮತ್ತು ಮನೆಯ ಹೊರ ಭಾಗಗಳಲ್ಲಿ ಕೆಲಸಗಳನ್ನು ಮಾಡಿಕೊಳ್ಳಲು ಪ್ರಚಾರ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು  ತಿಳಿಸಿರುತ್ತಾರೆ.
ಕಳೆದ 3 - 4 ತಿಂಗಳುಗಳ ಹಿಂದೆಯೂ ಕೂಡಾ ಇದೇ ರೀತಿ 1 ವರ್ಷದ ಕರುವೊಂದನ್ನು ಚಿರತೆ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿರುತ್ತದೆ. ಈ ವಿಚಾರವಾಗಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು  ಸೂಕ್ತ ಕ್ರಮ ವಹಿಸಬೇಕಾಗಿ ಗ್ರಾಮಸ್ಥರು ಆತಂಕಗೊಂಡು ಪತ್ರಿಕೆಯೊಂದಿಗೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net