ಕರುನಾಡು ಸಾಮರಸ್ಯದ ತೋಟವಾಗಿಯೇ ಉಳಿಯಲಿ: ಸಚಿವ ಎಸ್.ಟಿ. ಸೋಮಶೇಖರ್ ಆಶಯ

2
Published on

ಮೈಸೂರು: ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ಕರುನಾಡು ಎಂದೆಂದೂ ಎಲ್ಲ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡ ನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ನಾಡಿನ ಐಕ್ಯತೆಯ ಯತ್ನ ನಿರಂತರವಾಗಿ ನಡೆದಿದ್ದು, ಕರ್ನಾಟಕ ಏಕೀಕರಣದ ಚರಿತ್ರೆಯನ್ನು ಎಲ್ಲರೂ ತಿಳಿಯುವುದು ಅಗತ್ಯ. ಕರ್ನಾಟಕ ಏಕೀಕರಣ ಮತ್ತು ನಾಮಕರಣದ ಸುದೀರ್ಘ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದಿತು ಎಂದರು.

ಭಾರತೀಯ ಭಾಷೆ ಮತ್ತು ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಇರುವ ಚೆಲುವ ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕರ್ನಾಟಕದ ಸ್ಥಾನ ಇಂದು ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಅಗ್ರ ಪಂಕ್ತಿಯಲ್ಲಿದೆ. ಭಾರತದ ಒಟ್ಟಾರೆ ಆರ್ಥಿಕ ವರಮಾನದಲ್ಲಿ ಕರ್ನಾಟಕದ್ದೇ ಸಿಂಹಪಾಲು. ಮಾಹಿತಿ ತಂತ್ರಜ್ಞ್ಞಾನದ ದಿಗ್ಗಜರು ನಾವು. ಶೈಕ್ಷಣಿಕವಾಗಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿರುವ ನಾಡು ನಮ್ಮದು. ವಿಜ್ಞಾನಿಗಳ ಕರ್ಮಭೂಮಿ ನಮ್ಮ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿದರು.

ಕೆ.ಎಸ್. ನರಸಿಂಹಸ್ವಾಮಿ ಹೇಳಿರುವಂತೆ ‘ಕನ್ನಡವೇ ಪ್ರಾಣ ಪದಕ’ ಎಂದು ನಾವು ಭಾವಿಸಿರುವುದು ನಿಜ. ಆದರೆ, ನಮ್ಮ ಮಕ್ಕಳು ತಮ್ಮ ಭವಿಷ್ಯದ ಹಾದಿ ಕಂಡುಕೊಳ್ಳಲು ಭಾಷೆಗಳು ನೆರವಾಗಬೇಕು. ನಾವು ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವುದರ ಜತೆಗೆ ಇತರ ಭಾಷೆ, ಸಂಸ್ಕೃತಿ ನಮ್ಮದಾಗಿಸಿಕೊಳ್ಳಬೇಕಿದೆ ಎಂದರು.

ಕರ್ನಾಟಕವೆಂದರೆ ಕೇವಲ ಗಡಿ ರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕೃತಿಯನ್ನು ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತವಾದ ಭಾವ. ಕರ್ನಾಟಕದ ಹಿರಿಮೆಗೆ ಕುಂದು ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ಎಚ್ಚರಿಸಿದರು.


ಪ್ರಸ್ತುತ ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷಾ ಜ್ಞಾನ ಅವಶ್ಯಕವಾಗಿದೆ. ಆದಾಗ್ಯೂ ಎಂದಿಗೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಿದ್ದರೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ ಎಂದರು.


ಕನ್ನಡ ಮಾಧ್ಯಮ ಶಾಲೆ ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದ್ದು, ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು ಅದನ್ನು ಇನ್ನೂ ಹೆಚ್ಚಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ರಾಜ್ಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದು. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.


ಮೇಯರ್ ಶಿವಕುಮಾರ್, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಉಪಮೇಯರ್ ರೂಪಾ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net