ಕರುನಾಡು ಸಾಂಸ್ಕೃತಿಕ ಭವನ ಉದ್ಘಾಟನೆ

bhavan
Published on

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಅನ್ಯ ಭಾಷೆಗಳ ಪ್ರಭಾವವಿರುವ ಕಾರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಚಟುವಟಿಕೆ ನಿರಂತರವಾಗಿ ನಡೆಸುವ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ನಗರದ ಕುಂಬಾರವಾಡ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಕರುನಾಡು ಸಾಂಸ್ಕೃತಿಕ ಭವನ ಭಾನುವಾರ ಸಂಜೆ ಉದ್ಘಾಟಿಸಿ, ನಾಡು-ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರುನಾಡು ಸಾಂಸ್ಕೃತಿಕ ಭವನ ಪೂರಕವಾಗಿ ಚಟುವಟಿಕೆಗಳನ್ನು ಏರ್ಪಡಿಸುವ ವೇದಿಕೆಯಾಗಲಿ ಎಂದು ಆಶಿಸಿದರು.

ಹಿರಿಯ ಚಿಂತಕ ಎಸ್.ರಾಮಕೃಷ್ಣನ್ ಮಾತನಾಡಿ, ಸಾಹಿತ್ಯ ಕಮ್ಮಟ, ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಕರುನಾಡು ವೇದಿಕೆ ಉತ್ತಮ ಕೆಲಸ ಮಾಡುತ್ತಿದೆ. ಎಲೆಮರೆ ಕಾಯಿಯಂತಿರುವ ಸಾಹಿತಿ, ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಮಾತನಾಡಿ, ಸರ್ಕಾರ ಹಾಗೂ ದಾನಿಗಳ ನೆರವಿಲ್ಲದೆ ಶಿಕ್ಷಕ, ಸಾಹಿತಿ ಡಾ.ಸಂಜೀವಕುಮಾರ ಅತಿವಾಳೆ ಅವರು ಕುಂಬಾರವಾಡ ರಸ್ತೆಯ ತಮ್ಮ ಸ್ವಂತ ನಿವೇಶನದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಿ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ನಿವೃತ್ತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪುಂಡಲೀಕರಾವ ಇಟಕಂಪಳ್ಳಿ, ಬಿ.ಎಂ. ಶಶಿಕಲಾ, ದಿಗಂಬರ ಮಡಿವಾಳ, ಡಾ. ಶಾಮರಾವ ನೆಲವಾಡೆ ಮಾತನಾಡಿದರು. ವೇದಿಕೆ ಗೌರವಾಧ್ಯಕ್ಷ ಡಾ. ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ್ ತಾಲೂಕು ಘಟಕದ ನೂತನ ನಿರ್ದೇಶಕರಾದ ಮನೋಹರ ಕಾಶಿ, ಪ್ರಭುಲಿಂಗ ತೂಗಾಂವೆ, ರಾಜು ಸಾಗರ, ಬಾಬುಕುಮಾರ, ಮಹ್ಮದ್ ಯುಸೂಫ್, ಮಹೇಶ ಮಡಿವಾಳೆ, ನರಸಪ್ಪ ಹಾಲೊಳ್ಳೆ, ಹೈದರ್ ಅಲಿ ಸೌದಾಗರ, ಕಾಶಿನಾಥ ಪಾಟೀಲ್, ಬೀನಾ ಕಾವಳೆ, ರಾಜಮ್ಮಾ ಚಿಕಪೇಟೆ, ಸಂಧ್ಯಾರಾಣಿ, ಸಂಪತ್ಕುಮಾರಿ ಅವರನ್ನು ಸನ್ಮಾನಿಸಲಾಯಿತು. ಡಾ.ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು. ಸುನೀತಾ ಬಿಕ್ಲೆ ನಿರೂಪಣೆ ಮಾಡಿದರು. ಶಿವಕುಮಾರ ಚನ್ನಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net