

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಕರೀಘಟ್ಟದ ಶ್ರೀ ಶ್ರೀನಿವಾಸಸ್ವಾಮಿ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ತಾಲೂಕಿನ ಶ್ರೀನಿವಾಸ ಅಗ್ರಹಾರ ಸಮೀಪದ ಬೆಟ್ಟದಲ್ಲಿ ದೇವಾಲಯದ ವೈದಿಕರು ಹಾಗೂ ಮೆಟ್ಟಿಲೋತ್ಸವ ಸಮಿತಿ ಸದಸ್ಯರ ಸಮ್ಮುಖದಲ್ಲಿ ಏಕಶಿಲೆಯ ಭಗವಂತನಿಗೆ ಏಕಾರತಿ, ದಟ್ಟಾರತಿ, ನಿತ್ಯ ಕೈಂಕರ್ಯ ಪೂಜೆ, ನಿತ್ಯ ಆರಾಧನೆ ಸೇವೆ, ಅಷ್ಟಾವಧನ ಸೇವೆ ಸೇರಿದಂತೆ ವಿಶೇಷ ಪೂಜೆ ನಡೆಯಿತು. ಅಭಿಷೇಕ, ಮಹಾಮಂಗಳಾರತಿ ಬಳಿಕ ಹೋಮ-ಯಾತ್ರದಾನ ನೆರವೇರಿಸಲಾಯಿತು.
ಬಳಿಕ ಲಕ್ಷ್ಮೀದೇವಿ, ಅಲುಮೇಲು ಮಂಗಮ್ಮ ಸಮೇತ ಶ್ರೀನಿವಾಸ ದೇವರ ಪಂಚಲೋಹದ ಉತ್ಸವ ಮೂರ್ತಿಯನ್ನು ವಿಶೇಷ ಹೂವುಗಳಿಂದ ಅಲಂಕರಿಸಿ, ಬ್ರಹ್ಮ ರಥದಲ್ಲಿ ಅರ್ಚಕ ಅಭಿಷೇಕ್ ನೇತೃತ್ವದಲ್ಲಿ ಪ್ರತಿಷ್ಠಾಪಿಸಿ, ಪೂಜಾ ಕೈಕಂರ್ಯ ನೆರವೇರಿಸಲಾಯಿತು. ಮೆಟ್ಟಿಲೋತ್ಸವ ಸೇವೆ, ಅವ್ಯಾರ್ಚನ ಸೇವೆಯೊಂದಿಗೆ ಮಧ್ಯಾಹ್ನ 2ಗಂಟೆಯ ಶುಭಲಗ್ನದಲ್ಲಿ ರಥತ್ಸೋವಕ್ಕೆ ತಹಸೀಲ್ದಾರ್ ಜಿ.ಅಶ್ವಿನಿ ಚಾಲನೆ ನೀಡಿದರು.
ದೇಗುಲ ಆವರಣದಲ್ಲಿ ನೆರೆದಿದ್ದ ಕರಿಘಟ್ಟದ ಸುತ್ತಲ ಗ್ರಾಮಗಳ ಗ್ರಾಮಸ್ಥರು ತೇರನ್ನು ಭಕ್ತಿಭಾವದಿಂದ ಎಳೆದರು. ಗೋವಿಂದ ನಾಮಸ್ಮರಣೆಯೊಂದಿಗೆ ಜೈಕಾರ ಹಾಕುತ್ತಾ ಭಕ್ತರು ಭಕ್ತಿ ಪರಾಕಷ್ಟೆ ಮೆರೆದರು. ಸಂಜೆಯ ವರೆಗೂ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀನಿವಾಸನ ದರ್ಶನ ಪಡೆದರು.
ಭಕ್ತರಿಗೆ ದಾನಿಗಳು ಮಜ್ಜಿಗೆ, ಪಾನಕ, ಕೋಸಂಬರಿ, ಕಲ್ಲಂಗಡಿ ಹಾಗೂ ಪ್ರಸಾದ ವಿತರಿಸಿದರು. ಶ್ರೀನಿವಾಸ ಅಗ್ರಹಾರ, ಕೆ.ಶೆಟ್ಟಹಳ್ಳಿ, ಗೌರಿಪುರ, ಚಿನ್ನನಾಯಕಹಳ್ಳಿ, ಮರಳಗಾಲ ಗ್ರಾಮಗಳು ಸೇರಿದಂತೆ ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಿಂದಲೂ ಭಕ್ತರು ಆಗಮಿಸಿದ್ದರು.