

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿಯ ಗ್ರಾಮದೇವತೆ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ, ಇನ್ನಿತರೆ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗಿದೆ.
ಏ. 30ರಂದು ಗ್ರಾಮಸ್ಥರಿಂದ ಸಾರಬಾನದ ಎಡೆ ಸಮರ್ಪಣೆಯಾಗಲಿದೆ. ಮೇ 1ರಂದು ಹೂವಿನ ಪಲ್ಲಕ್ಕಿ ಮೆರವಣಿಗೆಯೂ ಗ್ರಾಮದ ಬೀದಿಗಳಲ್ಲಿ ಸಂಚರಿಸಲಿದೆ.
2ರಂದು ದೇವಿಯ ಉತ್ಸವ ಮೂರ್ತಿಯನ್ನು ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಸಣ್ಣ ರಥೋತ್ಸವ, 3ರಂದು ನಡೆಯಲಿರುವ ಅಮ್ಮನ ದೊಡ್ಡ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಸಂಜೆ ಭಂಡಾರದ ತಂಬಿಗೆ ಪೂಜಾ ಕೈಂಕರ್ಯ ನೆರವೇರಲಿದೆ.
4ರಂದು ಸಂಜೆ ಸಿಡಿ ಉತ್ಸವ, 5ರಂದು ಓಕುಳಿ ಸೇವೆ, ಕಂಕಣ ವಿಸರ್ಜನೆ, ದೇವಿಯ ಗುಡಿದುಂಬುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.