ಕರಿ ಹರಿದ ಬಿಳಿ ಎತ್ತು

11 lxr 1
Published on

ಲಕ್ಷ್ಮೇಶ್ವರ: ಕಾರ ಹುಣ್ಣಿಮೆ ಹಬ್ಬವನ್ನು ರೈತ ಸಮುದಾಯ ಬುಧವಾರ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸಿದರು.

ಹಬ್ಬದ ದಿನ ಬೆಳಗ್ಗೆ ಎತ್ತುಗಳ ಮೈ ತೊಳೆದು ಎಳ್ಳೆಣ್ಣೆ, ಮಜ್ಜಿಗೆ, ಅರಿಶಿಣಪುಡಿ, ಉಪ್ಪು, ತತ್ತಿಯನ್ನು ಗೊಟ್ಟ ಹಾಕುತ್ತಾರೆ. ಇದು ತಮ್ಮ ಜೀವನಾಡಿ ಎತ್ತುಗಳಿಗೆ ಯಾವುದೇ ರೋಗರುಜಿನ ಬಾರದಿರಲೆಂದು ಮಾಡುವ ಪದ್ಧತಿ. ಬಳಿಕ ಎತ್ತುಗಳ ಕೋಡುಗಳನ್ನು ಪಾಲಿಶ್ ಮಾಡಿ ಬಣ್ಣ ಹಚ್ಚಿ ಕೋಡಿನ ತುದಿಗೆ ತಾಮ್ರದ ಕೊಂಬೆಣಸು ಹಾಕಿ ರಿಬ್ಬನ್, ಬಲೂನ್ ಕಟ್ಟಿ ಕೊರಳಿಗೆ ಗಜ್ಜೆಪಟ್ಟಿ ಕಟ್ಟಿ ಶೃಂಗರಿಸುತ್ತಾರೆ.

ವಿಶೇಷವಾಗಿ ಅಲಂಕರಿಸಿದ ಎತ್ತು, ಹೋರಿಗಳನ್ನು ರೈತರು ಗೋಧೂಳಿ ಸಮಯದಲ್ಲಿ ಊರ ಅಗಸಿ ರಸ್ತೆಯಲ್ಲಿ ಓಡಿಸುತ್ತ ಅದರ ಹಿಂದೆ ತಾವೂ ಓಡಿ ಸಂತಸ ಪಟ್ಟರು. ಎತ್ತುಗಳ ಮೈಮೇಲೆ ರಾಮಧೂತ, ಭೂಮಿತಾಯಿ ಚೊಚ್ಚಲ ಮಗ, ಪುಣ್ಯಕೋಟಿ, ಮನೆದೇವ್ರ, ರಾಜಕುಮಾರ, ಒಡಹುಟ್ಟಿದವರು, ಮುಂಗಾರು ಮಳೆ, ನಮ್ಮ ಬಸವ ಹೀಗೆ ಬರೆದು ಪ್ರೀತಿ ಮೆರೆದರು. ಯಾವ ಎತ್ತುಗಳು ಮೊದಲು ಕೊಬ್ಬರಿ ಸರ ಹರಿದು ಮುಂದೆ ಓಡುತ್ತವೆಯೋ ಆ ಎತ್ತುಗಳು ಕರಿ ಹರಿದಂತೆ. ಇದು ಈ ಹಬ್ಬದ ಸಂಪ್ರದಾಯ. ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಉತ್ತಮ ಎಂತಲೂ, ಕರಿ ಎತ್ತು ಕರಿ ಹರಿದರೆ ಮುಂಗಾರು ಉತ್ತಮ ಎಂತಲೂ ಭಾವಿಸುತ್ತಾರೆ.

ಲಕ್ಷ್ಮೇಶ್ವರದಲ್ಲಿ ದೇಸಾಯಿಬಣ, ಹುಲಗೇರಿ ಬಣ, ಪೇಠಬಣ, ಹಿರೇಬಣದ ಅಗಸಿ ಬಾಗಿಲಲ್ಲಿ ಕರಿ ಹರಿಯುವ ಹಬ್ಬ ಆಚರಿಸಲಾಯಿತು. ನಂತರ ಪಟ್ಟಣದ ಆರಾಧ್ಯದೈವ ಸೋಮೇಶ್ವರನ ಸನ್ನಿಧಿಯಲ್ಲಿ ಮುಳಗುಂದ ಮನೆತನದ ಬಿಳಿ ಎತ್ತು ಕರಿ ಹರಿಯಿತು. ಎತ್ತು ಓಡಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು, ಮಕ್ಕಳು ಸೇರಿದ್ದರು. ಕರಿ ಹರಿದ ಎತ್ತುಗಳ ಜತೆ ನೂರಾರು ಎತ್ತುಗಳನ್ನು ಸೇರಿಸಿ ಸಂಜೆ ಸೋಮೇಶ್ವರ ತೇರಿನಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಲಕ್ಷ್ಮೇಶ್ವರ ರಾಮಧೂತ ಹೋರಿಯ ವೈಭವ ನೋಡಲು ಯುವಕರು ಗುಂಪುಗುಂಪಾಗಿ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net