ಕರಾವಳಿಯ ಯಕ್ಷಗಾನ ಮಲೆನಾಡಲ್ಲೂ ಜನಪ್ರಿಯ

29 Tth 01
ತೀರ್ಥಹಳ್ಳಿಯಲ್ಲಿ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರದ ಮೂರನೇ ವಾರ್ಷಿಕೋತ್ಸವದಲ್ಲಿ ಆರಗ ಜ್ಞಾನೇಂದ್ರ, ಸಂದೇಶ್ ಜವಳಿ, ಭಾಗವತ ದಿನೇಶ್ ಭಟ್, ಅನಂತ ಪದ್ಮನಾಭಾಚಾರ್ಯ, ಶೈಲೇಶ್ ತೀರ್ಥಹಳ್ಳಿ ಇತರರಿದ್ದರು.
Published on

ತೀರ್ಥಹಳ್ಳಿ: ಸನಾತನ ವೌಲ್ಯಗಳನ್ನು ನಿಖರವಾಗಿ ಮುಂದಿನ ತಲೆಮಾರಿಗೆ ತಲುಪಿಸುವ ಹಾಗೂ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ 3ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ಧಾರ್ಮಿಕ ಭಾವನೆಯೊಂದಿಗೆ ಹೊಸ ಮಜಲನ್ನು ಸೃಷ್ಟಿಸುತ್ತಿರುವ ಯಕ್ಷಗಾನ ಕನ್ನಡನಾಡಿನ ಹೆಮ್ಮೆಯ ಕಲೆ ಎಂದರು.

ಕರಾವಳಿಯಿಂದ ವಲಸೆ ಬಂದಿರುವವರಿಂದ ಇದೀಗ ಮಲೆನಾಡಿನಲ್ಲೂ ಯಕ್ಷಗಾನ ಜನಪ್ರಿಯವಾಗಿದೆ. ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ತಪಸ್ಸಿನಂತೆ ಈ ಕಲೆಯನ್ನು ಆರಾಸುತ್ತಾರೆ. ಕರಾವಳಿ ಮೂಲದ ವಿದ್ವಾಂಸರು ಮತ್ತು ಕಲಾವಿದರು ತಮ್ಮ ಬದುಕನ್ನೇ ಈ ಕಲೆಗೆ ಮೀಸಲಾಗಿಟ್ಟಿರುವ ಉದಾಹರಣೆ ಇದೆ. ಅಂಥವರಲ್ಲಿ ಶೈಲೇಶ್ ತೀರ್ಥಹಳ್ಳಿ ಕೂಡ ಒಬ್ಬರು. ಈ ಕಲೆಯ ವೌಲ್ಯವನ್ನು ಅರಿಯುವ ಮಾನಸಿಕತೆಯನ್ನು ಎಳೆಯ ಪ್ರಾಯದವರಲ್ಲಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಉದ್ಯಮಿ ಅನಂತ ಪದ್ಮನಾಭಾಚಾರ್ಯ ಮಾತನಾಡಿ, ರಂಗಕಲೆಯಲ್ಲಿ ಧಾರ್ಮಿಕ ಭಾವನೆಯೊಂದಿಗೆ ಭಾರತೀಯತೆಯ ಶ್ರೇಷ್ಠ ಪರಂಪರೆ ಮೂಡಿಸುವ ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಬೇರೊಂದಿಲ್ಲ ಎಂದು ಅಭಿಪ್ರಾಯಪಟ್ಟರು.

ಯಕ್ಷಗಾನ ತರಬೇತುದಾರ ಶೈಲೇಶ್ ತೀರ್ಥಹಳ್ಳಿ ಮಾತನಾಡಿ, ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ಇತರ ಜಾನಪದ ಕಲೆಯಂತೆ ಯಕ್ಷಗಾನ ಕಲೆಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ಯಕ್ಷಗಾನ ಕಲಾವಿದರಾದ ದರಲಗೋಡು ಕೃಷ್ಣ ಜೋಯ್ಸ ಮತ್ತು ಮಂಗಳಗಾರು ರಮೇಶಾಚಾರ್ಯ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಚಿತ್ರಕಲೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ್ ಜವಳಿ, ಭಾಗವತ ದಿನೇಶ್ ಭಟ್ ಯಲ್ಲಾಪುರ, ರೋಹಿತ್ ಶೇಡ್ಗಾರ್, ಅಂಬರೀಶ್ ಇದ್ದರು. ಸಭಾ ಕಾರ್ಯಕ್ರಮದ ನಂತರ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net