ಕರಾವಳಿ ಜನರ ಪ್ರೀತಿ, ವಿಶ್ವಾಸ ಅನನ್ಯ: ಸಂಗೀತ ನಿರ್ದೇಶಕ ಗುರುಕಿರಣ್ ಅಭಿಮತ

10
Published on

ಮೈಸೂರು: ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಸರಾದ ಮೈಸೂರಿನಲ್ಲಿ ಕರಾವಳಿ ಜನರು ಎಲ್ಲರೊಟ್ಟಿಗೆ ಪ್ರೀತಿ, ವಿಶ್ವಾಸದಿಂದ ಬದುಕು ನಡೆಸುವ ಜತೆಗೆ ತಮ್ಮತನವನ್ನು ಉಳಿಸಿಕೊಂಡಿದ್ದಾರೆ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮೈಸೂರು ರಾಜರು ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿದ್ದರಿಂದ ಕಲೆ, ಸಂಸ್ಕೃತಿ, ಸಾಹಿತ್ಯ ಬೆಳೆದಿದೆ. ಇಂತಹ ನಗರದಲ್ಲಿ ಕರಾವಳಿ ಜನರು ಪ್ರೀತಿ, ವಿಶ್ವಾಸ ಗಳಿಸಿ, ಬದುಕು ನಡೆಸುತ್ತಿದ್ದಾರೆ. ಜತೆಗೆ ಕರ್ನಾಟಕದ ಉಪ ಭಾಷೆಗಳಾದ ತಮ್ಮ ತುಳು-ಕೊಡವ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡಿನ ವಿವಿಧ ಜಿಲ್ಲೆ ಅಲ್ಲದೇ, ವಿವಿಧ ರಾಜ್ಯ, ಸಾಗರದಾಜೆಯೂ ಉತ್ತರ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜನರು ನೆಲೆಸಿದ್ದಾರೆ. ಸ್ಥಳೀಯವಾಗಿ ಎಲ್ಲರೊಟ್ಟಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುತ್ತಿರುವುದಲ್ಲದೇ, ಉದ್ಯಮ ಕಟ್ಟಿ ಅಲ್ಲಿನ ಅಭಿವೃದ್ಧಿಗೂ ಕಾರಣಕರ್ತರಾಗುತ್ತಿದ್ದಾರೆ ಎಂದರು.
ಕಲೆಗೆ ಹೆಸರಾದ ಇಂತಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕರಾವಳಿ ಜನರು ಬಹಳ ಖುಷಿಯಿಂದ ಇದ್ದಾರೆ. ಮಂಗಳೂರಿನಲ್ಲಿ ಪ್ರಸಿದ್ಧವಾದ ಬಲೆ ತೆಲಿಪಾಲೆ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಆಚೆಗೆ ಮೈಸೂರಿನಲ್ಲಿ ನಡೆಸಲಾಗುತ್ತಿರುವುದು ಹೆಮ್ಮೆ ಪಡಬೇಕಾದ ವಿಚಾರ ಎಂದು ಹೇಳಿದರು.
ಒಕ್ಕೂಟಕ್ಕೆ ಚಾಲನೆ ನೀಡಿದ ಮೇಯರ್ ಶಿವಕುಮಾರ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಗಳ ಜನರು ಮೈಸೂರಿನಲ್ಲಿ ಉದ್ಯಮಿಗಳಾಗಿ ವೃತ್ತಿ ಧರ್ಮ ಪಾಲಿಸಿಕೊಂಡು ಬರುತ್ತಿದ್ದಾರೆ. ನಗರದಲ್ಲಿ 12 ಸಾವಿರ ಕುಟುಂಬಗಳ 65 ಸಾವಿರ ಜನಸಂಖ್ಯೆ ಇರುವ ಕರಾವಳಿ ಜಿಲ್ಲೆಗಳ ಜನರು ನಾನಾ ಉದ್ಯಮಗಳಲ್ಲಿ ತೊಡಗಿದ್ದು, ಅವರಿಗೆ ನಗರಪಾಲಿಕೆಯಿಂದ ಉದ್ಯಮ ಪರವಾನಗಿ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಗ್ರೇಸಿಯನ್ ರೋಡ್ರಿಗಸ್ ಮಾತನಾಡಿ, ನಮ್ಮ ಆಹಾರ, ಸಂಸ್ಕೃತಿ, ಭಾಷೆಗೆ ಒತ್ತುಕೊಟ್ಟು ಒಕ್ಕೂಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಎಲ್ಲ್ಲ ಜಾತಿ, ಜನಾಂಗ, ಧರ್ಮದವರನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಗಳ ಒಕ್ಕೂಟ ದಕ್ಷಿಣ ಕನ್ನಡದ ಸುಳ್ಯದಿಂದ ಉತ್ತರ ಕನ್ನಡದ ಶಿರಸಿವರೆಗೂ ಕರಾವಳಿ ಜನರನ್ನು ಒಂದು ಕಡೆ ತರುವ ಉದ್ದೇಶವನ್ನು ಒಕ್ಕೂಟ ಹೊಂದಿದೆ. ಮುಂದೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಮುಂದಿನ ತಿಂಗಳು ಮೈಸೂರಿನ ಕಾರಾಗೃಹ ವಾಸಿಗಳಿಗೆ ಆರೋಗ್ಯ ತಪಾಸಣೆಇ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಒಕ್ಕೂಟದ ಗೌರವ ಅಧ್ಯಕ್ಷ ಎಸ್.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಒಕ್ಕೂಟದ ಧ್ಯೇಯ, ಉದ್ದೇಶ, ಕಾರ್ಯಕ್ರಮಗಳ ರೂಪರೇಷ ಬಗ್ಗೆ ತಿಳಿಸಿದರು.
ಉದ್ಯಮಿಗಳಾದ ಡಾ.ಸುರೇಶ್ ಶೆಟ್ಟಿ ಗುರ್ಮೆ, ಡಾ.ಶಿವಶರಣ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷರಾದ ಎಂ.ಕೆ.ಪುರಾಣಿಕ, ಡಾ.ಸುಧೀರ್‌ಶೆಟ್ಟಿ, ಡಾ.ಲಕ್ಷ್ಮಿನಾರಾಯಣ ಶೆಣೈ, ರತ್ನರಾಜ್, ನಾರಾಯಣ ವಿ.ಹೆಗ್ಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net