ಕರಾವಳಿ ಆತಂಕ ಇಮ್ಮಡಿ

thalapady new
Published on

ಕಾಸರಗೋಡು/ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 6 ಮಂದಿಯಲ್ಲಿ ಕರೊನಾ ಪಾಸಿಟಿವ್ ವರದಿ ಬಂದಿದ್ದು, ಕರಾವಳಿ ಜನರ ಆತಂಕವನ್ನು ಇಮ್ಮಡಿಗೊಳಿಸಿದೆ. ಕಾಸರಗೋಡು ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ಮತ್ತಷ್ಟು ಬಿಗುಗೊಳಿಸಿ, ಜಿಲ್ಲೆಯ 12 ಒಳರಸ್ತೆಗಳನ್ನು ಮುಚ್ಚಿ ಆದೇಶ ಹೊರಡಿಸಿದೆ.

ಕೇರಳ ರಾಜ್ಯದಲ್ಲಿ ಶುಕ್ರವಾರ 12 ಮಂದಿಯಲ್ಲಿ ಕರೊನಾ ವೈರಸ್ ಸೊಂಕು ಕಾಣಿಸಿಕೊಂಡಿದೆ. ಕಾಸರಗೋಡು ಹೊರತಾಗಿ ಎರ್ನಾಕುಳಂ 5 ಹಾಗೂ ಪಾಲಕ್ಕಾಡಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.ರಾಜ್ಯದಲ್ಲಿ ಇದುವರೆಗೆ ವೈರಸ್ ಬಾಧಿತರ ಸಂಖ್ಯೆ 40ಕ್ಕೇರಿದೆ. ಇವರಲ್ಲಿ 37 ಮಂದಿ ಚಿಕಿತ್ಸೆಯಲ್ಲಿದ್ದಾರೆ. 44390 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 44165 ಮಂದಿ ಮನೆಗಳಲ್ಲಿ ಹಾಗೂ 225 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಗುರುವಾರ ಒಂದೇ ದಿನ 56 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನತಾ ಕರ್ಫ್ಯೂಗೆ ಕೇರಳ ಸಿಎಂ ಬೆಂಬಲ

ಮಾರ್ಚ್ 22ರಂದು ಆಹ್ವಾನ ನೀಡಿರುವ ಜನತಾ ಕರ್ಪ್ಯೂಗೆ ಕೇರಳ ಸಂಪೂರ್ಣ ಬೆಂಬಲ ನೀಡಲಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅಂದು ಕೆಎಸ್ಸಾರ್ಟಿಸಿ, ಮೆಟ್ರೋ ರೈಲು ಸಹಿತ ಸಾರಿಗೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕೋವಿಡ್ 19 ಆರ್ಥಿಕವಾಗಿ ರಾಜ್ಯವನ್ನು ಕಂಗಾಲಾಗಿಸಿದೆ. ಕೋವಿಡ್- 19 ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮ ಹಾಗೂ ಇದರಿಂದ ರಾಜ್ಯಕ್ಕೆ ಉಂಟಾಗಿರುವ ಸಂಕಷ್ಟವನ್ನು ಪ್ರಧಾನಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸವನ್ನು ನೂರರಿಂದ ನೂರೈವತ್ತಕ್ಕೇರಿಸಬೇಕು, ದಿನದ ವೇತನದಲ್ಲೂ 50ರೂ. ಹೆಚ್ಚಳ ಮಾಡಬೇಕು, ಕೋವಿಡ್- 19 ಸೋಂಕು ಪರಿಗಣಿಸಿ ಗ್ರಾಮೀಣಾಭಿವೃದ್ಧಿ ನಿಧಿಯಿಂದ 2 ಸಾವಿರ ಕೋಟಿ ರೂ. ಮೊತ್ತ ಸಾಲವಾಗಿ ನೀಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಸ್ವಯಂ ನಿಗಾದಲ್ಲಿ ಇಬ್ಬರು ಶಾಸಕರು

ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮತ್ತು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಕರೊನಾ ಸೋಂಕು ಪೀಡಿತ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಸ್ವಯಂ ನಿಗಾದಲ್ಲಿದ್ದಾರೆ.

ಇತ್ತೀಚೆಗೆ ದುಬೈನಿಂದ ಬಂದಿದ್ದ ವ್ಯಕ್ತಿಗೆ ಕರೊನಾ ವೈರಸ್ ಬಾಧಿಸಿರುವುದು ಗುರುವಾರ ಪತ್ತೆಯಾಯಿತು. ಈ ವ್ಯಕ್ತಿ ಪಾಲ್ಗೊಂಡಿದ್ದ ಮದುವೆ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಇಬ್ಬರು ಶಾಸಕರೂ ಪಾಲ್ಗೊಂಡಿದ್ದರು. ಎನ್.ಎ ನೆಲ್ಲಿಕುನ್ನು ಕಾಸರಗೋಡು ನೆಲ್ಲಿಕುಂಜೆಯಲ್ಲಿ ಹಾಗೂ ಎಂ.ಸಿ.ಕಮರುದ್ದೀನ್ ಉಪ್ಪಳದ ತಮ್ಮ ನಿವಾಸದಲ್ಲಿ ಸ್ವಯಂ ನಿಗಾದಲ್ಲಿದ್ದಾರೆ. ಜನಪ್ರತಿನಿಧಿಗಳೆಂಬ ಕಾರಣಕ್ಕೆ ಇಬ್ಬರೂ ಶಾಸಕರು ಹಲವಾರು ಸಮಾರಂಭಗಳಲ್ಲಿ ಭಾಗವಹಿಸಿದ್ದು, ಪ್ರಸಕ್ತ ಇವರ ರೂಟ್ ಮ್ಯಾಪ್ ಸಿದ್ಧಪಡಿಸುವುದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸವಾಲಾಗಿದೆ. ದುಬೈಯಿಂದ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಮಾರ್ಚ್ 12ರಂದು ಏರ್‌ಇಂಡಿಯಾ ವಿಮಾನದಲ್ಲಿ ಬಂದಿದ್ದ ಕೂಡ್ಲು ನಿವಾಸಿ, ಅಲ್ಲಿಂದ ಬೆಳಗ್ಗೆ 3.40ರ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಸರಗೋಡಿಗೆ ಬಂದಿದ್ದರು. ಮನೆಗೆ ಬಂದ ನಂತರ ಮದುವೆ ಹಾಗೂ ಫುಟ್‌ಬಾಲ್ ಪಂದ್ಯಾಟ ಸಹಿತ ವಿವಿಧೆಡೆಗೆ ತೆರಳಿದ್ದರು.

ಗಡಿಯ ಯಾವೆಲ್ಲ ರಸ್ತೆಗಳು ಬಂದ್?

ಮಂಜೇಶ್ವರ: ಕೇರಳ-ಕರ್ನಾಟಕ ಗಡಿಭಾಗದ 12 ರಸ್ತೆಗಳನ್ನು ಕಾಸರಗೋಡು ಜಿಲ್ಲಾಡಳಿತ ಬಂದ್ ಮಾಡಿ ಆದೇಶ ಹೊರಡಿಸಿದೆ.

5 ಗಡಿ ರಸ್ತೆಗಳಲ್ಲಿ ತೀವ್ರ ತಪಾಸಣೆ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಮಂಜೇಶ್ವರದ ತೂಮಿನಾಡು ರಸ್ತೆ, ಕೆಂಬಾಡಿ-ಪದವು ರಸ್ತೆ, ಸುಂಕದಕಟ್ಟೆ-ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವು ರಸ್ತೆ, ಬದಿಯಡ್ಕದ ಸ್ವರ್ಗ-ಅರಿಯಪದವು ರಸ್ತೆ, ಆದೂರಿನ ಕೊಟ್ಯಾಡಿ ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಗಾಳಿಮುಖ- ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು-ಸುಳ್ಯಪದವು ರಸ್ತೆ, ಬೇಡಡ್ಕದ ಚೆನ್ನಂಗೋಡು-ಚಾಮಕೊಚ್ಚಿ ರಸ್ತೆಗಳನ್ನು ಪೂರ್ಣ ರೂಪದಲ್ಲಿ ಮುಚ್ಚಲಾಗಿದೆ.

ತಲಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಕಸ್ಥಳ-ಅಡ್ಯನಡ್ಕ ರಸ್ತೆ, ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ, ಮಾಣಿಮೂಲೆ-ಸುಳ್ಯ ರಸ್ತೆ, ಪಾಣತ್ತೂರು-ಚೆಂಬೇರಿ-ಮಡಿಕೇರಿ ರಸ್ತೆಗಳಲ್ಲಿ ಕಡ್ಡಾಯ ಸುರಕ್ಷೆ, ತಪಾಸಣೆ ಏರ್ಪಡಿಸಲಾಗಿದೆ. ವೈದ್ಯರು, ಜೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್, ಆರೋಗ್ಯ ಇಲಾಖೆ ಕಾರ್ಯಕರ್ತರು, ಪೊಲೀಸರು ಸೇರಿರುವ ತಂಡ ತಪಾಸಣೆಗೆ ನೇತೃತ್ವ ವಹಿಸಲಿದೆ. ಕರೊನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ತಲಪಾಡಿಯಲ್ಲಿ ತಪಾಸಣೆಗೆ ಅಸಹಕಾರ

ಮಂಜೇಶ್ವರ: ಕರೊನಾ ವೈರಸ್ ಹರಡಿಸುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಕೇರಳ-ಕರ್ನಾಟಕ ಗಡಿಯ ತಲಪಾಡಿಯಲ್ಲಿ ಆರೋಗ್ಯ ತಪಾಸಣಾ ಕೇಂದ್ರದ ವ್ಯವಸ್ಥೆ ಮಾಡಿದೆ. ಆದರೆ, ಮಂಗಳೂರು ಕಡೆಯಿಂದ ತಮ್ಮ ವಾಹನಗಳಲ್ಲಿ ಬರುವ ಸಾಕಷ್ಟು ಮಂದಿ ಈ ತಪಾಸಣಾ ಕೇಂದ್ರವನ್ನು ತಪ್ಪಿಸಿ, ಅಡ್ದದಾರಿಗಳನ್ನು ಬಳಸಿ ಕುಂಜತ್ತೂರು ಮಾರ್ಗವಾಗಿ ಕಾಸರಗೋಡಿಗೆ ಹೋಗುತ್ತಿದ್ದಾರೆ. ತಪಾಸಣೆ ಕಿರಿಕಿರಿ ಎಂಬ ಭಾವನೆಯಿಂದ ಈ ರೀತಿ ಮಾಡುತ್ತಿರುವುದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ವಿದೇಶದಿಂದ ಬಂದ ಕೆಲವರು ಗಡಿ ಪ್ರದೇಶದಲ್ಲಿ ತಪಾಸಣೆಗೊಳಗಾಗದೆ ಮನೆಯಲ್ಲಿರುವ ಬಗ್ಗೆಯೂ ದೂರುಗಳಿವೆ. ಗಡಿ ಪ್ರದೇಶದಲ್ಲಿ ಯುವಕರು ಹಾಗೂ ಮಕ್ಕಳು ಸಂಜೆ ವೇಳೆ ಗುಂಪುಗೂಡಿ ಆಡುತ್ತಾರೆ. ಸಮಾರಂಭಗಳಿಗೂ ಕಾಸರಗೋಡು ಜಿಲ್ಲೆಯ ಹಲವೆಡೆ ಕಡಿವಾಣವಿಲ್ಲ ಎಂಬ ಆಕ್ಷೇಪವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ನಾಳೆ ಖಾಸಗಿ ಬಸ್ ಬಂದ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಪ್ಯೂ ಕರೆಗೆ ದ.ಕ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಬೆಂಬಲ ವ್ಯಕ್ತಪಡಿಸಿದ್ದು, ಮಾ.2ರಂದು ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳನ್ನು ಓಡಿಸದಿರಲು ಸಂಘ ನಿರ್ಧರಿಸಿದೆ. ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿರುವ ಸಾಧ್ಯತೆ ಇರುವುದರಿಂದ ಸರ್ವೀಸ್, ಬಸ್ ಸಿಟಿ ಬಸ್‌ಗಳ ಓಡಾಟವನ್ನು ನಿಲ್ಲಿಸುವುದಾಗಿ ದ.ಕ ಜಿಲ್ಲಾ ಖಾಸಗಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಿಲ್ಲಿಸುವ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಗಾದಲ್ಲಿ 14 ಮಂದಿ

ಮಂಗಳೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಶುಕ್ರವಾರ 630 ಮಂದಿ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 14 ಮಂದಿಯಲ್ಲಿ ಆರೋಗ್ಯ ಸಮಸ್ಯೆ ಇದ್ದವರು ಕಂಡು ಬಂದಿದ್ದು, ಅವರನ್ನು ಸರ್ಕಾರಿ ಕ್ವಾರಂಟೈನ್ ವ್ಯವಸ್ಥೆಯಡಿ ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕ್ವಾರಂಟೈನ್‌ಗೆ ಒಳಗಾದವರು ‘ಬಿ’ ವರ್ಗೀಕರಣಕ್ಕೆ ಸಂಬಂಧಿಸಿದವರಾಗಿದ್ದು, ಅಂದರೆ ತಪಾಸಣೆ ವೇಳೆ ರೋಗ ಲಕ್ಷಣ ಇಲ್ಲದಿದ್ದರೂ, 35 ವರ್ಷ ಮೇಲ್ಪಟ್ಟವರು ಅಥವಾ ಯುವಕರಾಗಿದ್ದು, ಅಸ್ತಮಾ, ಅಧಿಕ ಬಿಪಿ, ಕಿಡ್ನಿ ಸಮಸ್ಯೆ ಮೊದಲಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು. ಇವರನ್ನೆಲ್ಲ ‘ಬಿ’ವರ್ಗೀಕರಣದಡಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. 5 ಮಂದಿ ಜ್ವರ-ಶೀತ ಕೆಮ್ಮು ಮೊದಲಾದವುಗಳಿಂದ ಬಳಲುತ್ತಿರುವವರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

9 ಸ್ಯಾಂಪಲ್‌ಗಳನ್ನು ಟೆಸ್ಟ್‌ಗೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಲಾದ 17 ಸ್ಯಾಂಪಲ್‌ಗಳ ವರದಿ ಸಿಕ್ಕಿದ್ದು, ಎಲ್ಲವೂ ನೆಗೆಟಿವ್. ಇಲ್ಲಿಯವರೆಗೆ 36,951 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, 1,564 ಮಂದಿಯನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ವೆನ್‌ಲಾಕ್ ಕ್ವಾರಂಟೈನ್‌ನಲ್ಲಿ ಸದ್ಯ ಯಾರೂ ಇಲ್ಲ. 10 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿ 28 ದಿನವನ್ನು ಪೂರೈಸಿದ್ದಾರೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಮನೆಗೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೆ 1,04,515 ಮನೆಗಳಿಗೆ ಭೇಟಿ ನೀಡಿ, 4 ಲಕ್ಷ ಮಂದಿಯಲ್ಲಿ ಜಾಗೃತಿ ಮೂಡಿಸಲಾಗಿದ್ದು, ವಿದೇಶದಿಂದ ಬಂದವರನ್ನು ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಬುಲೆಟಿನ್ ತಿಳಿಸಿದೆ.

ಗಡಿ ಬಂದ್ ನಿರ್ಧಾರ ಆಗಿಲ್ಲ

ಗಡಿ ಜಿಲ್ಲೆಯ ಕಾಸರಗೋಡಿನಲ್ಲಿ ದ.ಕ ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಹೊರತುಪಡಿಸಿ ಇತರ ರಸ್ತೆಗಳನ್ನು ಬಂದ್ ಮಾಡಲಾಗಿದೆ. ದ.ಕ ಜಿಲ್ಲಾಡಳಿತ ಗಡಿ ಬಂದ್ ಮಾಡುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ. ಈಗಾಗಲೇ ಗಡಿ ಮೂಲಕ ಬರುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಭಾನುವಾರ ನ್ಯಾಯಬೆಲೆ ಅಂಗಡಿ ರಜೆ

ಕರೊನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಮಾ.22ರಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಅಂದು ನ್ಯಾಯಬೆಲೆ ಅಂಗಡಿಗಳಿಗೆ ರಜೆ ಘೋಷಿಸಲಾಗಿದೆ. ಅಂದಿನ ಪಡಿತರವನ್ನು ಮಾ.24ರಂದು ವಿತರಣೆಗೆ ಕ್ರಮಕೈಗೊಳ್ಳುವಂತೆ ನ್ಯಾಯಬೆಲೆ ಅಂಗಡಿ ವರ್ತಕರಿಗೆ ಸೂಚಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರ ಪ್ರಕಟಣೆ ಹೊರಡಿಸಿದ್ದ

ಪುತ್ತೂರಲ್ಲಿ ವಿದೇಶದಿಂದ ಬಂದವರು 67 ಮಂದಿ!

ಪುತ್ತೂರು: ಕಡಬ ಸೇರಿದಂತೆ ಪುತ್ತೂರು ತಾಲೂಕಿನಲ್ಲಿ ವಿದೇಶದಿಂದ ಸ್ವದೇಶಕ್ಕೆ ಮರಳಿದ 67 ಮಂದಿ ಇದ್ದಾರೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, 14 ದಿನಗಳ ನಿಗಾ ವಹಿಸಲಾಗುತ್ತಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 4 ಬೆಡ್‌ಗಳ ಐಸೊಲೇಶನ್ ವಾರ್ಡ್ ಹಾಗೂ 6 ಬೆಡ್‌ಗಳ ಪ್ರತ್ಯೇಕ ಆರೈಕೆ ವಾರ್ಡ್ ಸೇರಿದಂತೆ ಕಡಬ, ಉಪ್ಪಿನಂಗಡಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪ್ರತ್ಯೇಕ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಾಹಿತಿ ಸಂಗ್ರಹಿಸುವ ಆಶಾ ಕಾರ್ಯಕರ್ತೆಯರು ಈ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ರೋಡೀಕರಿಸಲಾಗುತ್ತದೆ. ಅನಂತರ ತಾಲೂಕು ಆರೋಗ್ಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ರವಾನೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದಲೂ ರೋಗಿಗಳ ದಿನವಹಿ ಮಾಹಿತಿಯನ್ನು ತಾಲೂಕು ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗುತ್ತಿದೆ.

ಕಾರ್ಯಕರ್ತೆಯರಿಂದ ಮನೆಗೆ ಭೇಟಿ

ಕಡಬ ಮತ್ತು ಪುತ್ತೂರು ತಾಲೂಕಿನ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲಿ ಕರೊನಾ ಸೋಂಕು ಹಾಗೂ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡುವ ಕೆಲಸಗಳು ನಡೆಯುತ್ತಿವೆ. ಆಶಾ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಮೂಲಕ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಗ್ರಾಮ ಸಭೆ ಮುಂದೂಡಿಕೆ ಹಾಲಿ ಗ್ರಾಪಂಗಳಲ್ಲಿ ಗ್ರಾಮ ಸಭೆಗಳು ನಡೆಯುತ್ತಿದ್ದವು. ಈಗಾಗಲೇ ಶೇ.75 ಗ್ರಾಪಂಗಳಲ್ಲಿ ಸಭೆಗಳು ನಡೆದಿವೆ. ಆದರೆ ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಸಭೆಗಳ ಸಹಿತ ಎಲ್ಲ ಸಭೆಗಳನ್ನು ಮುಂದೂಡಿಕೆ ಮಾಡಿ ಗ್ರಾಪಂಗಳಿಗೆ ಆದೇಶ ಮಾಡಲಾಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ. ಕರೊನಾ ಜಾಗೃತಿಗೆ ಸಂಬಂಧಿಸಿ ಗ್ರಾಪಂಗಳ ಮೂಲಕವೂ ಮನೆ ಮನೆಗೆ ಕರಪತ್ರ ತಲುಪಿಸಲು ಸೂಚನೆ ನೀಡಲಾಗಿದೆ. ಜನರಲ್ಲಿ ಭಯ ಬೇಡ ಎನ್ನುವ ಸಂದೇಶದ ಬ್ಯಾನರ್ ಅಳವಡಿಸುವ ನಿಟ್ಟಿನಲ್ಲಿ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕರೊನಾ ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿ ಸೂಚನೆಯಂತೆ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ಕೈ ಸ್ವಚ್ಛ ಮಾಡಲು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಕಡ್ಡಾಯವಾಗಿ ಮುಖ ಕವಚ ಬಳಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ರೂಪಾ ಟಿ.ಶೆಟ್ಟಿ ಪೌರಾಯುಕ್ತೆ, ಪುತ್ತೂರು ನಗರಸಭೆ ಸುಳ್ಳು ಸುದ್ದಿಗಳನ್ನು ನಂಬದೆ, ಭಯ ಪಡದೆ ಜಾಗ್ರತೆ ವಹಿಸಲು ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಜನತೆ ಹೆಚ್ಚು ಭಯ ಪಡುತ್ತಿರುವುದು ಕಂಡುಬರುತ್ತಿದೆ. ವಿದೇಶದಿಂದ ಬಂದ ವ್ಯಕ್ತಿಗಳ ಮಾಹಿತಿ ನೀಡಬೇಕು. ಈ ಸೋಂಕು ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ಮಾತ್ರ ರಾಜ್ಯದಲ್ಲಿ ಕಂಡುಬಂದಿದೆ. ವಿಶೇಷವಾಗಿ ವಿದೇಶಗಳಿಂದ ಮರಳಿ ತಮ್ಮ ಮನೆಗೆ ಬಂದಿರುವ ವ್ಯಕ್ತಿಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡಾ.ಅಶೋಕ್ ಕುಮಾರ್ ರೈ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net