ಕರಾಳ ಸ್ಥಿತಿ ತಲುಪಿದ ಕಾಂಗ್ರೆಸ್ ಸರ್ಕಾರ

NS Hegde
Published on

ಮುಂಡಗೋಡ: ಶಾಸಕರಾಗಿ ಒಂದು ರಸ್ತೆ ಮತ್ತು ಚರಂಡಿಗಳನ್ನು ಕೂಡ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ವ ಪಕ್ಷದ ಶಾಸಕರೇ ಮುಂದಾಗುತ್ತಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ಕರಾಳ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂಬುದು ಅರ್ಥವಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹೇಳಿದರು.

ಪಟ್ಟಣದ ಬಸವಣ್ಣ ದೇವಾಲಯ ಸಭಾಂಗಣದಲ್ಲಿ 50 ವರ್ಷದ ತುರ್ತು ಪರಿಸ್ಥಿತಿಯ ಕರಾಳ ದಿನದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿದ ಬಳಿಕ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಎರಡು ವರ್ಷದಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದ್ದು, ಒಂದಿಲ್ಲೊಂದು ಹಗರಣಗಳಲ್ಲಿಯೇ ಮುಳುಗಿದೆ. ಸಚಿವ ಸಂಪುಟದ ಸಚಿವರ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಆರೋಪ ಹೊಂದಿರುವ ಸಚಿವರನ್ನು ಸಂಪುಟದಿಂದ ತಕ್ಷಣ ಕೈಬಿಡಬೇಕು ಎಂದರು.

ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷ ಶಿವರಾಮ ಹೆಬ್ಬಾರ ಆಗಮನ ಪೂರ್ವದಲ್ಲಿ ಎಷ್ಟು ಬಲಿಷ್ಟವಿತ್ತೋ ಈಗಲೂ ಅಷ್ಟೆ ಬಲಿಷ್ಟವಾಗಿದ್ದು, ಅವರು ಪಕ್ಷ ಬಿಟ್ಟು ಹೋಗಿರುವುದರಿಂದ ಯಾವುದೇ ವ್ಯತ್ಯಾಸವಾಗಿಲ್ಲ. ಬದಲಾಗಿ ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ ಎಂದರು. ರಾಜ್ಯ ಸರ್ಕಾರದ ಬೆಲೆ ಏರಿಕೆ ಧೋರಣೆಯಿಂದಾಗಿ ಜನತೆ ಬೇಸತ್ತು ಹೋಗಿದ್ದಾರೆ. ಕೆಪಿಟಿಸಿಎಲ್ ಹಾಗೂ ಕೆಎಸ್​ಆರ್​ಟಿಸಿ ದಿವಾಳಿಯ ಹಂತ ತಲುಪಿವೆ. ಇವತ್ತೇ ರಾಜ್ಯದಲ್ಲಿ ಚುನಾವಣೆ ನಡೆದರೂ 150ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಅಂದಾ ದರ್ಬಾರ ಸರ್ಕಾರವಿದೆ. ಎಲ್ಲ ಇಲಾಖೆಯಲ್ಲಿಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮುಂಡಗೋಡ ಪೊಲೀಸ್ ಠಾಣೆಗೆ ಹೋದರು ಕೂಡ ಹಣವಿಲ್ಲದೆ ಕೆಲಸವಾಗುತ್ತಿಲ್ಲ. ಏಜಂಟರ ಹಾವಳಿ ಹೆಚ್ಚಿದೆ. ಇದಕ್ಕೆ ಲಗಾಮು ಹಾಕುವರು ಯಾರು ಇಲ್ಲದಂತಾಗಿದೆ ಎಂದರು.

ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಮುಖಂಡರಾದ ಅಶೋಕ ಚಲವಾದಿ, ಪ್ರೇಮಕುಮಾರ, ಸುಬ್ರಾಯ ವಾಳ್ಕೆ, ಮಹೇಶ ಹೊಸಕೊಪ್ಪ, ಬಸವರಾಜ ಠಣಕೆದಾರ, ವಿಠ್ಠಲ ಬಾಳಂಬೀಡ, ಉಮೇಶ ಗಾಣಿಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net