

ಧಾರವಾಡ: ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ವಾಣಿಜ್ಯ ಕಾಯ್ದೆ ಮತ್ತು ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸಂಬಂಧಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ರೈತ ಕೃಷಿ ಕಾರ್ವಿುಕ ಸಂಘಟನೆಯಿಂದ (ಆರ್ಕೆಎಸ್) ನಗರದ ವಿವೇಕಾನಂದ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಆಲ್ ಇಂಡಿಯಾ ಕಿಸಾನ್ ಖೇತ್ ಮಜ್ದೂರ್ ಸಂಘಟನೆ (ಎಐಕೆಕೆಎಂಎಸ್) ಸಂಯೋಜಿತ ರೈತ ಕೃಷಿ ಕಾರ್ವಿುಕ ಸಂಘಟನೆಯಿಂದ ಅಖಿಲ ಭಾರತ ರೈತರ ಏಕತಾ ದಿನದ ಅಂಗವಾಗಿ ಕರಾಳ ಕಾಯ್ದೆಗಳ ಭೂತ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕಲಾಭವನ ಮೈದಾನದಿಂದ ವಿವೇಕಾನಂದ ವೃತ್ತದವರೆಗೆ ಮೆರವಣಿಗೆ ಮೂಲಕ ತೆರಳಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಲಾಯಿತು.
ಆರ್ಕೆಎಸ್ ಜಿಲ್ಲಾಧ್ಯಕ್ಷ ಲಕ್ಷ್ಮ್ಮ ಜಡಗಣ್ಣವರ ಮಾತನಾಡಿ, ದೇಶದ ಕಾಪೋರೇಟ್ ವಲಯಗಳ ಮಹದಾಸೆಯಂತೆ ಕೇಂದ್ರ ಸರ್ಕಾರ ರೈತರಿಗೆ ನೂತನ ಕಾಯ್ದೆಗಳ ಮೂಲಕ ಮರಣ ಶಾಸನ ಬರೆದಿದೆ. ಲಾಕ್ಡೌನ್ ಸಮಯವನ್ನು ದುರುಪಯೊಗಪಡಿಸಿಕೊಂಡಿರುವ ಸರ್ಕಾರ, ರೈತರಿಗೆ, ದೇಶದ ದುಡಿಯುವ ಜನತೆಗೆ ಮಹಾದ್ರೋಹ ಎಸಗಿದೆ. ಈವರೆಗೆ ಸಹಿಸಿಕೊಂಡಿದ್ದ ರೈತರ ಸಹನೆಯ ಕಟ್ಟೆ ಈಗ ಒಡೆದಿದೆ. ಕೂಡಲೆ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದರು.
ಆರ್ಕೆಎಸ್ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಮಂಜು ಜೋಡಳ್ಳಿ, ಅಲ್ಲಾವುದ್ದಿನ್ ಅಡ್ಲಿ, ಗೋವಿಂದ ಕೃಷ್ಣಪ್ಪನವರ, ಮಾರುತಿ ಪೂಜಾರ, ಜಗದೀಶ ಪೂಜಾರ, ಶಿವಲಿಂಗಪ್ಪ ಉಣಕಲ್, ಫಕ್ಕೀರಪ್ಪ ಕೋಟಿ, ಈಶ್ವರ ನಾಡಿಗೇರ, ಬಸಪ್ಪ ಜೋಗಿ, ಇತರರಿದ್ದರು.