

ಮೈಸೂರು: ಅಂತಾರಾಷ್ಟ್ರೀಯ ಕ್ರೀಡೆಯಾಗಿರುವ ಕರಾಟೆಯು ಧೈರ್ಯ ಮತ್ತು ಚಾಕಚಕ್ಯತೆಯ ಅತ್ಯುತ್ತಮ ಕ್ರೀಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 19ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಷಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾಟೆ ಕಲಿಕೆಯಿಂದ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಉಪಯೋಗವಾಗಲಿದೆ. ಕರಾಟೆಯಂತಹ ಸಮರ ಕಲೆಗಳು ಸ್ವಾಭಿಮಾನ ಜೀವನ ಕಲಿಸುವ ಜತೆಗೆ ಅಗತ್ಯ ಕೌಶಲ ವೃದ್ಧಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಕ್ರೀಡಾ ಭಾವನೆಯಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಮಹಮ್ಮದ್ ಆಲಿ ಬಹುದೊಡ್ಡ ಖ್ಯಾತ ಬಾಕ್ಸಿಂಗ್‌ಪಟು. ಮೂರು ಬಾರಿಯ ವಿಶ್ವ ಹೆವಿವೇಯ್ಟ ಚಾಂಪಿಯನ್ ಆಗಿದ್ದರು. ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬಾಕ್ಸರ್ ಎಂದು ಪರಿಗಣಿಸಲಾಗುತ್ತದೆ. ಅಂತಹವರನ್ನು ಸ್ಫೂರ್ತಿಯಾಗಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ವಿ.ನಂಜರಾಜೇಅರಸ್, ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸೋಸಲೆ ಸಿದ್ದರಾಜು, ಎಸಿಪಿ ಪ್ರತಾಪ್ ರೆಡ್ಡಿ, ಯುವ ಸಬಲೀಕರಣ ಹಾಗೂ ಕೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಅಕಾಡೆಮಿ ಕಾರ್ಯದರ್ಶಿ ದೀಪಕ್ ಕುಮಾರ್, ಟಿ.ಪಿ.ಬಸವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.