

ರೋಣ: ಗ್ರಾಮ ಪಂಚಾಯಿತಿ ಚುನಾವಣೆ ಯಾವುದೇ ಪಕ್ಷ ಆಧಾರಿತವಲ್ಲ. ಆದರೆ, ತಾಲೂಕಿನಲ್ಲಿ ಕೆಲ ಅಭ್ಯರ್ಥಿಗಳು ರಾಜಕೀಯ ಮುಖಂಡರ ಹಾಗೂ ಪಕ್ಷದ ಹೆಸರು ಬಳಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ತಾಲೂಕಿನ ಡ.ಸ. ಹಡಗಲಿ ಗ್ರಾಮ ಪಂಚಾಯಿತಿ 1 ಮತ್ತು 2ನೇ ವಾರ್ಡ್ನ ಐದು ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಮಾಜಿ ಸಚಿವರೊಬ್ಬರ ಹೆಸರು ಬಳಸಿಕೊಂಡಿದ್ದಾರೆ. ಅಲ್ಲದೆ, ಸಚಿವರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಕರಪತ್ರದಲ್ಲಿ ನಮೂದಿಸಿ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮದ ಕೆಲವರು, ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗುಳೆ ಹೋದವರಿಗೆ ಗಾಳ ಸತತ ಬರ, ನೆರೆ ಹಾವಳಿಯಿಂದ ತತ್ತರಿಸಿರುವ ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ವಿುಕರು ಉದ್ಯೋಗ ಅರಿಸಿ ಮಂಗಳೂರು, ಗೋವಾ ಮತ್ತಿತರ ನಗರಗಳಿಗೆ ದುಡಿಯಲು ಹೋಗಿರುವವರ ಮಾಹಿತಿಗಳನ್ನು ಕಲೆ ಹಾಕಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮೂಲಕ ಕರೆ ತರಲು ಕಸರತ್ತು ನಡೆಸಿದ್ದಾರೆ.
ಡ.ಸ. ಹಡಗಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷ, ಮಾಜಿ ಸಚಿವರೊಬ್ಬರ ಹೆಸರು ಹಾಗೂ ಅವರ ಅಭಿವೃದ್ಧಿ ಕೆಲಸಗಳನ್ನು ತಮ್ಮ ಕರಪತ್ರಗಳಲ್ಲಿ ಮುದ್ರಿಸಿ ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. | ಸಂತೋಷ ಗುಡಿಮನಿ ಡ.ಸ. ಹಡಗಲಿ ಗ್ರಾಪಂ ರಿಟರ್ನಿಂಗ್ ಅಧಿಕಾರಿ