ಕರ್ನಾಟಕ ಬಂದ್‌ಗೆ ಮೈಸೂರು ಭಾಗಶಃ ಸ್ತಬ್ಧ

Karnataka Bandh
Published on

ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್’ಗೆ ನಗರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇಡೀ ಸಾಂಸ್ಕೃತಿಕ ನಗರಿ ಭಾಗಶಃ ಸ್ತಬ್ಧವಾಗುವ ಮೂಲಕ ಜನಜೀವನ ಅಸ್ತವ್ಯಸ್ತಗೊಂಡಿತು.


ಸ್ಥಳೀಯ ಸಮಸ್ಯೆಯಾಗಿರುವ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಬಂದ್‌ಗೆ ನಿರೀಕ್ಷೆಯಂತೆ ಮೈಸೂರಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಸ್ವಯಂಪ್ರೇರಣೆಯಿಂದ ವರ್ತಕರು, ವ್ಯಾಪಾರಸ್ಥರು ಸೇರಿದಂತೆ ಎಲ್ಲ ವರ್ಗದವರು, ಜನಸಾಮಾನ್ಯರು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಬಂದ್ ಅನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದರು.


ಅಂಗಡಿ, ಮುಂಗಟ್ಟು, ವ್ಯಾಪಾರ ಮಳಿಗೆಗಳ ಬಾಗಿಲು ತೆರೆಯಲಿಲ್ಲ. ಆಟೋ, ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಆಸ್ಪತ್ರೆ, ಔಷಧ ಅಂಗಡಿ, ಪೆಟ್ರೋಲ್ ಬಂಕ್, ಹಾಲಿನ ಸೇವೆಯನ್ನು ಹೊರತುಪಡಿಸಿದರೆ ಎಲ್ಲ ಸೇವೆಗಳೂ ಸ್ಥಗಿತಗೊಂಡಿದ್ದವು.

ಎಲ್ಲೆಡೆ ಶಾಂತಿಯುತ ಹೋರಾಟ:


ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು. ಕೆಲಕಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದನ್ನು ಬಿಟ್ಟರೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿಲ್ಲ. ರಸ್ತೆಗಿಳಿದು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರ, ರಾಜ್ಯದ ಸಂಸದರು, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಾಲು ಸಾಲು ಪ್ರತಿಭಟನೆ, ಮೆರವಣಿಗೆ ನಡೆಸಿ ಅಸಮಾಧಾನ ಹೊರಹಾಕಿದರು.

ರಸ್ತೆಗಿಳಿಯಲಿಲ್ಲ ಬಸ್‌ಗಳು:


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯಲಿಲ್ಲ. ನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳೆರಡೂ ಬಿಕೋ ಎನ್ನುತ್ತಿದ್ದವು. ಈ ನಡುವೆ, ಇಲ್ಲಿ ಕೆಲವರು ನಿದ್ದೆಗೆ ಜಾರಿದ್ದರೆ, ಇನ್ನೂ ಕೆಲವರು ಬಸ್‌ಗಾಗಿ ಕಾಯ್ದು ಕುಳಿತಿದ್ದರು. ಬಂದ್ ಸದ್ಬಳಕೆ ಮಾಡಿಕೊಂಡ ಸಾರಿಗೆ ಸಿಬ್ಬಂದಿ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.


ರಜಾ ಮೂಡ್‌ನಲ್ಲಿ ಮಕ್ಕಳು:


ಆಟೋರಿಕ್ಷಾಗಳ ಓಡಾಟ ಅಲ್ಲಿ ಇಲ್ಲಿ ಕಂಡುಬಂದರೂ ಎಂದಿನಂತಿರಲಿಲ್ಲ. ಟ್ಯಾಕ್ಷಿ ಸೇವೆಯೂ ಇರಲಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಯಿತು. ಬಂದ್ ಹಿನ್ನೆಲೆಯಲ್ಲಿ ಬಹುತೇಕ ಜನರು ಮನೆಯಿಂದ ಹೊರಬರಲಿಲ್ಲ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಇಡೀ ದಿನವನ್ನು ಸಂಭ್ರಮದಿಂದ ಕಳೆದರು. ಕೆಲವರು ರಸ್ತೆ, ಉದ್ಯಾನದಲ್ಲಿ ಆಟವಾಡಿದರೆ, ಇನ್ನೂ ಕೆಲವು ಮಕ್ಕಳು ಅರ್ಧವಾರ್ಷಿಕ ಪರೀಕ್ಷೆಗಾಗಿ ಮನೆಯಲ್ಲೇ ಅಭ್ಯಾಸ ಮಾಡಿದರು.


ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಹಳ ವಿರಳವಾಗಿತ್ತು. ಜನರ ಓಡಾಟವೂ ಕಡಿಮೆ ಇತ್ತು. ಬೆರಳೆಣಿಕೆಯಷ್ಟು ಬೈಕ್, ಕಾರುಗಳ ಸಂಚಾರ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net