

ಬೀದರ್: ರಾಜಸ್ಥಾನದ ಜೈಪುರದಲ್ಲಿ ರಾಷ್ಟ್ರೀಯ ರಾಜಪೂತ್ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಾಮೇಡಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವುದನ್ನು ಖಂಡಿಸಿ ಸೇನೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಶಿವಾಜಿ ವೃತ್ತದಿಂದ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಧಾನಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಸುಖದೇವ್ ಸಿಂಗ್ ಅವರು ರಾಷ್ಟ್ರ ಹಾಗೂ ಸಮಾಜದ ಏಳಿಗೆಗೆ ತಮ್ಮ ಬದುಕು ಮುಡುಪಾಗಿಟ್ಟಿದ್ದರು. ಅವರ ಹತ್ಯೆ ಖಂಡನೀಯ. ಕೊಲೆ ಪ್ರಕರಣವನ್ನು ಕೂಡಲೇ ಎನ್.ಐ.ಎ.ಗೆ ವಹಿಸಬೇಕು. ಕೊಲೆಗೈದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಸುಖ್‍ದೇವ್ ಸಿಂಗ್ ಕೊಲೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಬೀದರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಾಜದವರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಪಾಲ್ಗೊಂಡಿದ್ದರು ಎಂದು ರಾಷ್ಟ್ರೀಯ ರಾಜಪೂತ್ ಕರಣಿ ಸೇನೆಯ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ವೀರೂಸಿಂಗ್ ಠಾಕೂರ್ ಹೇಳಿದರು.
ರಾಜಸ್ಥಾನಿ ವೈಷ್ಣವ್ ಸಮಾಜದ ಅಧ್ಯಕ್ಷ ಭವರಸಿಂಗ್, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಜಗಮೋಹನ್ ರಾಜಪೂತ, ನರಸಿಂಗ್ ಠಾಕೂರ್, ಮುಕೇಶ ಸಿಂಗ್ ಠಾಕೂರ್, ಬಾಲಾಜಿ ಸಿಂಗ್ ಠಾಕೂರ್, ಹರಿಸಿಂಗ್, ಸುರೇಂದ್ರ ಸಿಂಗ್, ರತನ್‍ಸಿಂಗ್ ಸಾಂಕ್ಲಾ, ವೀರಮಾ ಸುತಾರ್, ಓಂಸಿಂಗ್ ರಾಜಪೂತ್ ಮುಂತಾದವರು ಭಾಗವಹಿಸಿದ್ದರು.