ಕರಡಿಗೋಡಿನಲ್ಲಿ ಮುಂದುವರಿದ ಹುಲಿ ಸೆರೆ ಕಾರ್ಯಾಚರಣೆ

Oplus_16777216
Oplus_16777216
Published on

ಸಿದ್ದಾಪುರ: ಸಿದ್ದಾಪುರ ಸಮೀಪ ಕರಡಿಗೋಡು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸಾರ್ವಜನಿಕರು ಹುಲಿಯ ಚಲನವಲನ ಕಂಡ ಬೆನ್ನಲ್ಲೇ ಹುಲಿಯ ಹೆಜ್ಜೆ ಗುರುತನ್ನು ಅರಸಿ ಮಳೆಯ ನಡುವೆಯೇ ಎರಡನೇ ದಿನದ ಕಾರ್ಯಾಚರಣೆ ಮಂಗಳವಾರ ನಡೆಯಿತು. ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು.

ಈ ಹಿನ್ನೆಲೆ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ ಅವರ ಉಪಸ್ಥಿತಿಯಲ್ಲಿ 30 ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆ ವೇಳೆ ಹುಲಿಯ ಹೊಸ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಮೀಪವೇ ಇರುವ ಅರಣ್ಯದೆಡೆಗೆ ಹುಲಿ ಹೋಗಿರುವ ಸೂಚನೆ ಸಿಕ್ಕಿದೆ. ಮಂಗಳವಾರವೂ ಸಹ ಕಾರ್ಯಾಚರಣೆ ಮುಂದುವರಿದಿದ್ದು, ಹುಲಿಯ ಇರುವಿಕೆ ಕಂಡು ಬಂದರೆ ಅಗತ್ಯವಾದರೆ ಅರವಳಿಕೆ ನೀಡಿ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು.ಇದರಿಂದ ರೈತರು ಕಾರ್ಮಿಕರು ಹಾಗೂ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಕಾರ್ಯಾಚರಣೆ ವೇಳೆ ಸಂಕೇತ್ ಪೂವಯ್ಯ ತಿಳಿಸಿದರು.

ಹುಲಿಯ ಹೆಜ್ಜೆ ಗುರುತು ಅಥವಾ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ. ಒಂದು ವೇಳೆ ಹುಲಿಯ ಚಲನವಲನ ಮತ್ತೆ ಕಂಡು ಬಂದರೆ ಮತ್ತಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net