ಕರಡಿ ಹೇಳಿಕೆ ಸರಿಯಲ್ಲ:ಮಹಾಂತಯ್ಯನಮಠ

VEERESH MAHANTAYYANAMATH
Published on

ಕೊಪ್ಪಳ: ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಕರಡಿ ಮತ್ತು ಹಿಟ್ನಾಳ್ ಕುಟುಂಬದ ನಡುವೆ ಮಾತ್ರ ರಾಜಕೀಯ ಸ್ಪಧೆ ಇದೆ. ಉಳಿದವರದ್ದಲ್ಲ ಎಂಬ ಬಿಜೆಪಿ ಮಂಜುಳಾ ಕರಡಿ ಹೇಳಿಕೆ ಸರಿಯಲ್ಲವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರ ಯಾರಪ್ಪನ ಸ್ವತ್ತಲ್ಲ. ಕರಡಿ ಮತ್ತು ಹಿಟ್ನಾಳ್ ಕುಟುಂಬಕ್ಕೆ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಪಕ್ಷ. 1999ರಲ್ಲಿ ಬಸವರಾಜ ಹಿಟ್ನಾಳ್ ಜೆಡಿಎಸ್‌ನಿಂದ ಸ್ಪರ್ಧಿಸಿ 22ಸಾವಿರ ಮತ ಪಡೆದಿದ್ದಕ್ಕೆ 2004ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಶಾಸಕರಾದರು.

ಸಂಗಣ್ಣ ಕರಡಿ 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಬಳಿಕ 2008ರಲ್ಲಿ ಅವರನ್ನು ಕೈ ಹಿಡಿದಿದ್ದು, ಇದೇ ಜೆಡಿಎಸ್ ಪಕ್ಷ. ಆದರೆ, ಇವರಷ್ಟೇ ಕೊಪ್ಪಳ ಕ್ಷೇತ್ರದ ಅಧಿಪತಿಗಳು ಎಂಬಂತೆ ಮಾತನಾಡುವುದು ಸರಿಯಲ್ಲ. ರಾಜಕೀಯದಲ್ಲಿ ಟೀಕೆ ಸಹಜ. ಸಿ.ವಿ.ಚಂದ್ರಶೇಖರ್ ಚುನಾವಣೆಯಲ್ಲಿ ತಮಗಾದ ಅನ್ಯಾಯ ಖಂಡಿಸಿ ಸಂಗಣ್ಣ ವಿರುದ್ಧ ಮಾತನಾಡಿದ್ದಾರೆ. ಇದನ್ನು ವಿರೋಧಿಸುವ ಭರದಲ್ಲಿ ಕೊಪ್ಪಳ ಕ್ಷೇತ್ರವೇ ತಮ್ಮ ಸ್ವತ್ತು ಎಂಬಂತೆ ಮಾತನಾಡುವುದು ಆಕ್ಷೇಪಾರ್ಹ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net