ಸದೇಶ್ ಕಾರ್ಮಾಡ್ ಮೈಸೂರು
ಸೂಯೇಜ್ ಫಾರ್ಮ್‌ನಲ್ಲಿ ಎರಡೂವರೆ ದಶಕದಿಂದ ಸಂಗ್ರಹವಾಗಿರುವ ತ್ಯಾಜ್ಯ ಬೆಟ್ಟದ ರೀತಿಯಲ್ಲಿ ಬೆಳೆದು ನಿಂತಿದ್ದು, ಈ ತ್ಯಾಜ್ಯ ವನ್ನು ಬಯೋಮೈನಿಂಗ್ ಮೂಲಕ ಕರಗಿಸಲು ಪಾಲಿಕೆ ಮುಂದಾಗಿದ್ದು, ಸೂಯೇಜ್ ಫಾರ್ಮ್ ಸುತ್ತಮುತ್ತಲಿನ ಜನರು ಸದ್ಯದಲ್ಲಿಯೇ ತ್ಯಾಜ್ಯದ ದುರ್ವಾಸನೆಯಿಂದ ಮುಕ್ತಿ ಹೊಂದಲಿದ್ದಾರೆ.
ಬಯೋಮೈನಿಂಗ್ ಮೂಲಕ ತ್ಯಾಜ್ಯ ವಿಲೇವಾರಿ ಮಾಡಲು ನಗರ ಪಾಲಿಕೆ ಎರಡು ವರ್ಷಗಳ ಹಿಂದೆಯೇ ತೀರ್ಮಾನಿಸಿತ್ತಾದರೂ ಬಯೋಮೈನಿಂಗ್‌ಗೆ ಮೂರು ಟೆಂಡರ್ ಕರೆದ ಹಿನ್ನೆಲೆಯಲ್ಲಿ ಟೆಂಡರ್‌ನಲ್ಲಿ ಭಾಗವಹಿಸಲು ಯಾರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಯೋಜನೆ ನನೆಗುದಿಗೆ ಬಿದ್ದಿತ್ತು.
ಬಯೋಮೈನಿಂಗ್, ತ್ಯಾಜ್ಯ ಸಂಸ್ಕರಣೆ ಮತ್ತು ಸಾಗಾಟ ಎಂದು ಕಾಮಗಾರಿಯನ್ನು ಮೂರು ಭಾಗಗಳಾಗಿ ಈ ಹಿಂದೆ ವಿಂಗಡಣೆ ಮಾಡಲಾಗಿತ್ತು. ಮೂರು ಕಾಮಗಾರಿಯನ್ನು ಬೇರೆ ಬೇರೆಯವರಿಗೆ ಟೆಂಡರ್ ನೀಡಿದರೆ ಸಮನ್ವಯದ ಕೊರತೆಯಿಂದ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯಕ್ಕೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜತೆಗೆ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಯಾರು ಆಸಕ್ತಿ ತೋರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಂಗಲ್ ಟೆಂಡರ್ ಮೂಲಕ ಬಯೋಮೈನಿಂಗ್ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ನಗರ ಪಾಲಿಕೆಯ ಕೋರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಹಾಗಾಗಿ ಇದೀಗ ಸಿಂಗಲ್ ಟೆಂಡರ್ ಕರೆಯಲು ನಗರ ಪಾಲಿಕೆ ಕೈಗೊಂಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣೆ ಮುಕ್ತಾಯಗೊಂಡು ಹೊಸ ಸರ್ಕಾರ ರಚನೆಯಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲು ಪಾಲಿಕೆ ಸಿದ್ಧತೆ ನಡೆಸಿದೆ. ಹಾಗಾಗಿ ಕೆಲವೇ ತಿಂಗಳಿನಲ್ಲಿ ಬಯೋಮೈನಿಂಗ್ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
ಸೂಯೇಜ್‌ಫಾರ್ಮ್‌ನಲ್ಲಿ ಒಟ್ಟು 3.08 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು 58 ಕೋಟಿ ರೂ.ಮೊತ್ತದ ಯೋಜನೆ ರೂಪಿಸಲಾಗಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ನಗರ ಪಾಲಿಕೆಯ ತಂಡ ನಾಗಪುರಕ್ಕೆ ಭೇಟಿ ನೀಡಿ ಬಯೋಮೈನಿಂಗ್ ಕುರಿತು ಮಾಹಿತಿ ಸಂಗ್ರಹಿಸಿತ್ತು. ಇದೀಗ ನಾಗಪುರದ ಮಾದರಿಯಲ್ಲಿ ನಗರದ ಸೂಯೇಜ್ ಫಾರ್ಮ್ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ಕರಗಿಸಲು ಸಿದ್ಧತೆ ನಡೆಸಲಾಗುತ್ತಿದೆ. ನಾಗಪುರದಲ್ಲಿ ಪ್ರತಿನಿತ್ಯ 800 ರಿಂದ 1,000 ಟನ್ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತಿದ್ದು, ಪ್ಟಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಲ್ಲಿ ಉರುವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಣ್ಣನ್ನು ಲ್ಯಾಂಡ್‌ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಅದೇ ಮಾದರಿಯನ್ನು ಇಲ್ಲೂ ಕೂಡ ಅನುಸರಿಸಲಾಗುವುದು.
ನಗರದಲ್ಲಿ ಪ್ರತಿನಿತ್ಯ 500 ಟನ್ ತ್ಯಾಜ್ಯ ಉತ್ಪತಿಯಾಗುತ್ತಿದ್ದು, ಸೂಯೇಜ್‌ಫಾರ್ಮ್‌ನಲ್ಲಿ ಕೇವಲ 200 ಟನ್‌ನಷ್ಟು ಮಾತ್ರ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ. ಉಳಿದ ತ್ಯಾಜ್ಯ ಬೆಟ್ಟದ ರೀತಿಯಲ್ಲಿ ಪ್ರತಿನಿತ್ಯ ಬೆಳೆಯುತ್ತಿದೆ. ನಗರದ ಒಂಬತ್ತು ಕಡೆಗಳಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕ ತೆರೆಯಲಾಗಿದ್ದು, ಕೆಲವು ಘಟಕಗಳು ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸೂಯೇಜ್ ಫಾರ್ಮ್ ಮೇಲೆ ಒತ್ತಡ ಬೀಳಲು ಪ್ರಾರಂಭವಾಗಿದೆ.
ಈ ಸಮಸ್ಯೆ ನೀಗಿಸಲು ನಗರ ಪಾಲಿಕೆ ಇದೀಗ ರಾಯನಕೆರೆ ಮತ್ತು ಕೆಸರೆಯಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಯನಕೆರೆ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕೆಸರೆ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ಕೆಸರೆಯಲ್ಲಿ 200, ರಾಯನಕೆರೆಯಲ್ಲಿ 150 ಟನ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಬಹುದು. ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ಮೂರು ಘಟಕಗಳು ಹಾಗೂ 9 ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಹಂಚಿಕೆಯಾಗುವ ಹಿನ್ನೆಲೆಯಲ್ಲಿ ಸೂಯೇಜ್ ಫಾರ್ಮ್‌ನಲ್ಲಿ ಇನ್ನು ಮುಂದೆ ತ್ಯಾಜ್ಯ ಸಂಸ್ಕರಣೆಯಾಗದೆ ಬೆಟ್ಟದ ರೀತಿಯಲ್ಲಿ ಬೆಳೆಯುವುದು ತಪ್ಪಲಿದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಹಿಂದುಳಿಯಲು ಸೂಯೇಜ್‌ಫಾರ್ಮ್‌ನಲ್ಲಿ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಿರುವ ತ್ಯಾಜ್ಯದ ರಾಶಿ ಕೂಡ ಒಂದು ಕಾರಣ. ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿ ಆಗಬೇಕು. ಆದರೆ, ಸಂಗ್ರಹವಾಗುವಷ್ಟು ತ್ಯಾಜ್ಯವನ್ನು ಆಯಾ ದಿನವೇ ಸಂಸ್ಕರಣೆ ಮಾಡುವಷ್ಟು ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ತ್ಯಾಜ್ಯದ ರಾಶಿ ಬೆಳೆಯುತ್ತಾ ಹೋಯಿತು. ಇದೀಗ ತ್ಯಾಜ್ಯ ಸಂಸ್ಕರಣೆಗೆ ಹೊಸ ಎರಡು ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಹಳೆಯ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಮತ್ತಷ್ಟು ಉತ್ತಮ ಸಾಧನೆ ತೋರಲು ಇದರಿಂದ ಸಹಕಾರಿಯಾಗಲಿದೆ.
ಸೂಯೇಜ್ ಫಾರ್ಮ್‌ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ಕರಗಿಸಲು ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಎರಡು ತಿಂಗಳ ಒಳಗೆ ಹಳೆಯ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಲಕ್ಷ್ಮೀಕಾಂತ್ ರೆಡ್ಡಿ, ಪಾಲಿಕೆ ಆಯುಕ್ತ