ಕರಗ ಉತ್ಸವ, ಭಾವೈಕ್ಯತೆಯ ವೈಭವಕ್ಕೆ ಕ್ಷಣಗಣನೆ

Raghu_12_Karaga_Prep_@_Dharmaraya_Temple (3)
Published on

ಬೆಂಗಳೂರು:

ಸ್ಥಳೀಯ ಸಂಸ್ಕೃತಿಯೊಂದಿಗೆ ಹತ್ತಾರು ಧಾರೆಗಳು ಸಮ್ಮಿಲನಗೊಂಡಿರುವ ಜನಪದೀಯವೂ ಆಗಿರುವ ‘ಕರಗ ಉತ್ಸವ (ಹೂವಿನ ಕರಗ) ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರ್ಚಕ ವಿ. ಜ್ಞಾನೇಂದ್ರ 15ನೇ ಬಾರಿಗೆ ಉತ್ಸವ ನಡೆಸಿಕೊಡಲಿದ್ದಾರೆ.

ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಮಲ್ಲಿಗೆ ಕಂಪು ಸೂಸುತ್ತ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಶನಿವಾರ (ಏ. 12) ಮಧ್ಯರಾತ್ರಿ 12.30ಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಉತ್ಸವ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಕರಗ ನಡೆಸಿಕೊಡುವ ಪೂಜಾರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು ಕಬ್ಬನ್ ಪಾರ್ಕ್‌ನ ಕರಗದ ಕುಂಟೆಯಲ್ಲಿ ದ್ರೌಪದಿದೇವಿಗೆ ಗಂಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ತೆರಳಲಿದ್ದಾರೆ. ಬಳಿಕ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ರಾತ್ರಿ ಹೂವಿನ ಕರಗ ಉತ್ಸವ ಜರುಗಲಿದೆ.

40 ಅಡಿಯ ತೇರು:

ಮುಂಜಾನೆಯಿಂದಲೇ ಬಣ್ಣ ಬಣ್ಣದ ವಸ್ತುಗಳಿಂದ 40 ಅಡಿಯ ತೇರನ್ನು ಸಿಂಗರಿಸುವ ಕಾರ್ಯ ಆರಂಭವಾಗಲಿದೆ. ತೇರಿನ ಮೇಲೆ, ಕಲಶದ ಕೆಳಗೆ ಅರ್ಜುನ-ದ್ರೌಪದಿಯರ ಮೂರ್ತಿಗಳೊಂದಿಗೆ ವೀರ ಹನುಮಂತನ ಮೂರ್ತಿಯನ್ನೂ ವಿಶೇಷವಾಗಿ ಅಲಂಕರಿಸಲಾಗುತ್ತದೆ. ಉತ್ಸವಕರ್ತರು ಮತ್ತು ವೀರಕುಮಾರರು ಪೂಜಾರಿಗಳೊಂದಿಗೆ ಸಾಗುವ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಮೊಳಗಲಿದೆ. ಅಲ್ಲಿಂದ ವಾಪಸ್ ಬರುವಾಗ ವೀರಕುಮಾರರು ಹೊಂಗೆ ಹೂವಿನ ಗೊಂಚಲು ಕಿತ್ತುತಂದು ದೇವಸ್ಥಾನದಲ್ಲಿ ಮಂಟಪವನ್ನು ನಿರ್ಮಿಸುತ್ತಾರೆ. ಬಳಿಕ ಅರ್ಜುನ-ದ್ರೌಪದಿಯರ ವಿವಾಹ ಮಹೋತ್ಸವ ಕಾರ್ಯ ನೆರವೇರಲಿದೆ.

ಕರಗ ಉತ್ಸವ ಎಂದರೆ ಶಕ್ತಿ ದೇವತೆಯಾದ ದ್ರೌಪದಿ ಕರಗ. ಕುಂಭದಲ್ಲಿ ದುರ್ಗೆಯನ್ನು (ದ್ರೌಪದಿ) ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರಗೊಂಡ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀ ಧರ್ಮರಾಯ ದೇವಸ್ಥಾನದ ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಅರ್ಚಕ ಜ್ಞಾನೇಂದ್ರ ಕತ್ತಿ ಹಿಡಿದ ವೀರಕುಮಾರರ ನಡುವೆ ತಲೆಯ ಮೇಲೆ ಕರಗ ಹೊತ್ತು ಸಾಗಲಿದ್ದಾರೆ. ಹೀಗೆ ಮಧ್ಯರಾತ್ರಿ ದೇವಾಲಯದಿಂದ ಬಿಜಯ ಮಾಡಿಸಿ ಸಾಗುವ ಕರಗ ಶಕ್ತು ್ಯತ್ಸವ ಹಳೇ ಹಲವು ಪೇಟೆ ಬೀದಿಗಳಲ್ಲಿ ಸಂಚರಿಸಿ. ದೇವಾಲಯಗಳು ಹಾಗೂ ಕುಲಪುರೋಹಿತರ ಮತ್ತು ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ಸೂರ್ಯೋದಯದ ವೇಳೆಗೆ ದೇವಾಲಯ ತಲುಪಲಿದೆ.

ಕರಗ ಸಂಚಾರ ಮಾರ್ಗ:

ಧರ್ಮರಾಯಸ್ವಾಮಿ ದೇವಾಲಯದಿಂದ ಮಧ್ಯರಾತ್ರಿ ಬಿಜಯ ಮಾಡಿಸಿ ಹೊರಡುವ ಕರಗ ಶಕ್ತು ್ಯತ್ಸವ ಹಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀ ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಲಿದ್ದ್ದು, ಈ ಮಾರ್ಗಗಳಲ್ಲಿನ ಎಲ್ಲ್ಲ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ನಂತರ ಮಸ್ತಾನ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಲಿದೆ. ಬಳಿಕ ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡು ಹಾಲುಬೀದಿ, ಕಬ್ಬನ್‌ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನರಸಿಂಹ ಜೋಯಿಸ್‌ಗಲ್ಲಿ ಮೂರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಲಿದೆ.

ಭಕ್ತರಲ್ಲಿ ಮನವಿ:

ಕರಗ ಸಾಗುವ ವೇಳೆ ದಾರಿಯುದ್ದಕ್ಕೂ ಭಕ್ತರು ‘ಬಿಡಿ ಮಲ್ಲಿಗೆ ಹೂ’ ಬಳಸುವಂತೆ ಕೋರಲಾಗಿದೆ. ಗಂಧದ ಪುಡಿ, ಅರಿಶಿನ, ಕುಂಕುಮ, ಕಲ್ಯಾಣಸೇವೆ, ಬಾಳೆಹಣ್ಣು, ದವನ ಸೇರಿ ಯಾವುದೇ ಸಾಮಗ್ರಿಗಳನ್ನು ಕರಗದ ಮೇಲೆ ಎಸೆಯದೆ ದೂರದಿಂದಲೇ ನಮಸ್ಕರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕರಗ ಸಂಚರಿಸುವ ರಸ್ತೆಗಳನ್ನು ಸ್ವಚ್ಛವಾಗಿಡುವಂತೆ ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ. ಸತೀಶ್ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಧಾರ್ಮಿಕ ಆಚರಣೆಯ ವಿವರ

* ಬೆಳಗ್ಗೆ 10ಕ್ಕೆ ದೇವಾಲಯದಲ್ಲಿ ವಿಶೇಷ ಪೂಜೆ

* ಮಧ್ಯಾಹ್ನ 12ಕ್ಕೆ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ

* 2ಕ್ಕೆ ದೇವಾಲಯದ ಎದುರು ಕರ್ಪೂರ ಸೇವೆ

* 3ಕ್ಕೆ ಅರ್ಚಕರಿಗೆ ಬಳೆ ತೊಡಿಸುವ ಶಾಸ

* ಸಂಜೆ 4ಕ್ಕೆ ಅರ್ಚುನ ಮತ್ತು ದ್ರೌಪದಿ ದೇವಿಗೆ ವಿವಾಹ ಶಾಸ

* 5ಕ್ಕೆ ದೇವಾಲಯದಲ್ಲಿ ಶಾಂತಿ ಹೋಮ, ಗಣಹೋಮ

* ರಾತ್ರಿ 8ಕ್ಕೆ ಅರ್ಚಕ ಮನೆಗೆ ತೆರಳಿ ತಾಯಿಯ ಆರ್ಶೀವಾದ ಕೋರಿಕೆ

* 9ಕ್ಕೆ ಕರಗದ ಕುಂಟೆಗೆ ತೆರಳಿ ವಿಶೇಷ ಪೂಜೆ

* ಮಧ್ಯರಾತ್ರಿ 12ಕ್ಕೆ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ

* 12.30ಕ್ಕೆ ಹೂವಿನ ಕರಗದ ನಗರ ಸಂಚಾರ ಆರಂಭ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net