

ಮೈಸೂರು: ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ‘ಬಿಜೆಪಿಯ ನಿಜಕನಸುಗಳು’ ಭಿತ್ತಿಪತ್ರವನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಬಿಡುಗಡೆಗೊಳಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರವು ಶೇ.40ರಷ್ಟು ಕಮಿಷನ್ ಹಣಕ್ಕಾಗಿ ರಾಜ್ಯವನ್ನು ಹಾಳು ಮಾಡುತ್ತಿದೆ. ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಸಮುದಾಯಗಳು ಕಿತ್ತಾಡುವಂತೆ ಮಾಡಿದೆ. ಎಲ್ಲ ಸಮುದಾಯಗಳ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡಿದೆ. ಎಸ್‌ಸಿ, ಎಸ್‌ಟಿಗಳ ಮೇಲಿನ ದೌರ್ಜನ್ಯ ಶೇ.26ಕ್ಕೆ ಏರಿಕೆಯಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ ವಿರುದ್ಧ ಮತ ಹಾಕುವವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದುವೇ ಬಿಜೆಪಿ ನಿಜಕನಸುಗಳು ಎಂದು ಹರಿಹಾಯ್ದರು.
ಪಿಎಸ್‌ಐ, ಕೆಪಿಟಿಸಿಎಲ್ ಸೇರಿ ಸಹಾಯಕ ಇಂಜಿನಿಯರಿಂಗ್ ಹೀಗೆ ಪ್ರತಿ ಸರ್ಕಾರಿ ಹುದ್ದೆಗಳು 40 ಲಕ್ಷ ರೂ.ದಿಂದ 1 ಕೋಟಿ ರೂ. ವರೆಗೆ ಹರಾಜು ಹಾಕಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದರು.