

ಹೊಸಕೋಟೆ: ಸರ್ಕಾರದ ಬೆಂಬಲಿಗರೆ ಹೇಳುವಂತೆ ಕೇವಲ ಕಮಿಷನ್ ಆಸೆಗಾಗಿ ನಾಯಕರು ಕುರ್ಚಿ ಕಿತ್ತಾಟದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಜನಸಾಮಾನ್ಯರ ಸಂಕಷ್ಟಗಳಿಗೆ ಹೇಗೆ ಸ್ಪಂದಿಸಲು ಸಾಧ್ಯ ಎಂದು ಎಂದು ಶಾಸಕ ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕಲ್ಕುಂಟೆಯಲ್ಲಿ ಸೋಮವಾರ ಆಯೋಜಿಸಿದ್ದ ಕರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾ ಸೋಂಕಿನ ಮೊದಲ ಅಲೆ ಆರಂಭವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದ್ದರಿಂದ ಸರ್ಕಾರ ಹಠಾತ್ತನೆ ಲಾಕ್‌ಡೌನ್ ೋಷಿಸಿತು. ಆದರೆ 2ನೇ ಅಲೆಯ ತೀವ್ರತೆ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆ ನೀಡಿದ್ದರು. ಆದರೂ ಸರ್ಕಾರ ಅದರ ನಿರ್ವಹಣೆಗೆ ಸೂಕ್ತ ವ್ಯವಸ್ತೆ ಮಾಡಲಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಅತಿಹೆಚ್ಚು ಸಾವು ನೋವುಗಳಾದವು ಎಂದು ಬೇಸರ ವ್ಯಕ್ತಪಡಿಸಿದರು.
ಸೋಂಕು ತೀವ್ರವಾಗಿದ್ದಾಗ ಜನರಿಗೆ ಸೂಕ್ತ ಹಾಸಿಗೆ, ಆಕ್ಸಿಜನ್ ಸೌಲಭ್ಯ, ರೆಮ್‌ಡೆಸಿವಿರ್ ಚುಚ್ಚುಮದ್ದು ಸೇರಿ ಹಲವು ವ್ಯವಸ್ಥೆಗಳನ್ನು ಮಾಡಬೇಕಿದ್ದ ಸರ್ಕಾರ ಕೈಚೆಲ್ಲಿ ಕೂತಿತು. ಮುಖಂಡರು ಸಚಿವ ಪಟ್ಟದ ಕಿತ್ತಾಟದಲ್ಲಿ ತೊಡಗಿಕೊಂಡಿದ್ದರು. ಅಗತ್ಯವಸ್ತುಗಳ ಬೆಲೆ ಹೆಚ್ಚಿಸಿ, ಕೆಲಸ ಇಲ್ಲದೆ, ಸಂಪಾದನೆಯೂ ಇಲ್ಲದೆ ಅಸಹಾಯಕರಾಗಿದ್ದ ದುಡಿಯುವ ವರ್ಗದ ಸಂಕಷ್ಟವನ್ನೂ ಹೆಚ್ಚಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇರಳ, ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಗಳು ಪ್ರತಿ ಬಡ ಕುಟುಂಬಕ್ಕೆ 15 ವಸ್ತುಗಳನ್ನೊಳಗೊಂಡ ದಿನಸಿಕಿಟ್‌ಗಳನ್ನು ಕೊಡುವ ಜತೆಗೆ ಪ್ರತಿ ಬಡ ಕುಟುಂಬಕ್ಕೆ 4 ಸಾವಿರ ರೂ. ಧನಸಹಾಯವನ್ನು ಪ್ರತಿ ತಿಂಗಳು ನೀಡುತ್ತಿದೆ. ಅಲ್ಲಿನ ಸರ್ಕಾರದಂತೆ ನಮ್ಮ ರಾಜ್ಯ ಸರ್ಕಾರದ ಬಳಿಯೂ ಹಣವಿದೆ. ಆದರೆ, ಅದನ್ನು ಬಡವರಿಗೆ ಕೊಡಲು ಮನಸ್ಸಿಲ್ಲ ಎಂದು ದೂರಿದರು.
ಗುಂಡೂರು ಗ್ರಾಮದಲ್ಲಿ 250 ಜನರು ಹಾಗೂ ಕಲ್ಕುಂಟೆ ಗ್ರಾಮದಲ್ಲಿ 400 ಜನರಿಗೆ ಲಸಿಕೆಗಳನ್ನು ಕೊಡಲಾಯಿತು. ಶಾಸಕರು ವೈಯಕ್ತಿಕವಾಗಿ ಲಸಿಕೆ ಖರೀದಿಸಿ, ಕೊಟ್ಟಿದ್ದರು.