

ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮಿಷನರೇಟ್ನಲ್ಲಿ ಆಯುಕ್ತ ಆರ್. ದಿಲೀಪ ಮತ್ತು ಉಪ ಆಯುಕ್ತ ಕೃಷ್ಣಕಾಂತ ಮಧ್ಯದ ಶೀತಲ ಸಮರ ಮುಂದುವರಿದಿದೆ.
ಈ ಮಧ್ಯೆ ಇಬ್ಬರೂ ಅಧಿಕಾ ರಿಗಳನ್ನು ವರ್ಗಾವಣೆ ಮಾಡಿಬಿಡುವ ಕುರಿತು ರಾಜಧಾನಿ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಪ್ರಮುಖ ವಿಷಯಗಳ ಕುರಿತು ಚರ್ಚೆಗಾಗಿ ಭೇಟಿಗೆ ಕೋರಿ ಕಂಟ್ರೋಲ್ ರೂಂ ಮೂಲಕ ಉಪ ಆಯುಕ್ತರು, ಆಯುಕ್ತರಿಗೆ ಪತ್ರ ಬರೆದಿದ್ದರು. ಅದು ಮಾಧ್ಯಮಗಳ ಮೂಲಕ ಬಹಿರಂಗವಾಗಿ ನಗೆಪಾಟಲಿಗೂ ಗುರಿಯಾಯಿತು. ಆದಾಗ್ಯೂ, ಅದೇ ಸರಣಿ ಮುಂದುವರಿದಿದೆ. ಪೊಲೀಸ್ ಆಯುಕ್ತರು ಉಪಾಯುಕ್ತರಿಗೆ ಮೆಮೊ ಕಳುಹಿಸಿದ್ದಾರೆ. ಕಮಿಷನರೇಟ್ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳು ಇರುವುದು; ಅವರ ಕಾರ್ಯಶೈಲಿಯಲ್ಲಿಯ ಭಿನ್ನತೆ ಇತ್ಯಾದಿಗಳು ಹಲವು ತಿಂಗಳ ಹಿಂದೆಯೇ, ಈ ಕಾರಸ್ಥಾನ ನಡೆಸುವ ಬಾಲಂಗೋಚಿಗಳ ಆಟ ಶುರುವಾಗಲು ಕಾರಣವಾಗಿತ್ತು.
ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಬೈಗುಳ ಸಂಸ್ಕೃತಿಯಿಂದ ಆರ್. ದಿಲೀಪ ದೂರ. ಅಧೀನ ಅಧಿಕಾರಿ-ಸಿಬ್ಬಂದಿಗೆ ಮೆಮೊ ಕೊಡುವುದು ಅವರ ಶೈಲಿ. ಈ ಮೆಮೊಗಳೆಂದರೆ ಅನೇಕ ಪೊಲೀಸರಿಗೆ ಕಿರಿಕಿರಿ. ಹೀಗಾಗಿ, ಕಮಿಷನರ್ ಸಾಹೇಬರ ಶೈಲಿಗೆ ಇಲಾಖೆಯೊಳಗೆ ಕೆಲವರಿಗೆ ಅಸಮಾಧಾನವಿದೆ. ಇಬ್ಬರು ಅಧಿಕಾರಿಗಳ ಕಾರ್ಯವಿಧಾನದಲ್ಲಿ ಸ್ವಲ್ಪ ಭಿನ್ನತೆ ಇರುವುದೂ ಪ್ರತಿಷ್ಠೆಗೆ ಕಾರಣವಾಗಿತ್ತು. ಕಮಿಷನರೇಟ್ನಲ್ಲಿ ನಡೆದ ಕೆಲವು ಬೆಳವಣಿಗೆಗಳನ್ನು ‘ಕಾರಸ್ಥಾನಿಗಳು’ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ಇಬ್ಬರೂ ಅಧಿಕಾರಿಗಳ ಕಿವಿಯೂದಿದರು. ಇವು ಪ್ರತಿಷ್ಠೆ ಬೆಳೆಯಲು ಕಾರಣವಾಗಿ, ಸಮನ್ವಯ ಇಲ್ಲವಾಯಿತು. ಪತ್ರ ಸಮರಕ್ಕೆ ದಾರಿ ಮಾಡಿಕೊಟ್ಟಿತು ಎನ್ನಲಾಗಿದೆ.
ಮಹಿಳಾ ಕಾನ್ಸ್ಟೇಬಲ್ ಕಾರಣ?: ಅವಳಿ ನಗರದ ಓರ್ವ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಓರ್ವ ಮಹಿಳಾ ಕಾನ್ಸ್ಟೇಬಲ್ ಖಾಸಗಿ ಸ್ನೇಹ ಬೆಳೆಸಿಕೊಂಡಿದ್ದು ಕೆಲ ತಿಂಗಳ ಹಿಂದೆ ರಾದ್ಧಾಂತಕ್ಕೆ ಕಾರಣವಾಗಿತ್ತು. ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಪತಿ ದೂರು ನೀಡಲು ಮುಂದಾಗಿದ್ದರು. ಆ ಹಂತದಲ್ಲಿ ಮೇಲಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ಪ್ರಕರಣವನ್ನು ತಣ್ಣಗಾಗಿಸಿದ್ದರು ಎನ್ನಲಾಗಿದೆ. ಆ ಮೇಲಧಿಕಾರಿಯ ಕ್ರಮದ ಕುರಿತು ಬೇರೆ ಬೇರೆ ಹಂತದಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿದ್ದವು. ಇದು ಸಹ ಇಬ್ಬರು ಐಪಿಎಸ್ ಅಧಿಕಾರಿಗಳ ಸ್ವಪ್ರತಿಷ್ಠೆಯನ್ನು ಹೆಚ್ಚಿಸಿತ್ತು.
ಆಯುಕ್ತರಿಂದಲೇ ಶುರು?: ಆಯುಕ್ತರು ಅ. 2ರಂದು ಉಪಾಯುಕ್ತರಿಗೆ ಒಂದು ಪತ್ರ ಬರೆದಿದ್ದರು ಎಂದು ತಿಳಿದುಬಂದಿದ್ದು, ಸಾರಾಂಶ ಬಹಿರಂಗವಾಗಿಲ್ಲ. ಅ. 3ರಂದು ಉಪಾಯುಕ್ತರು ಆಯುಕ್ತರಿಗೆ ಪತ್ರ ಬರೆದು, 92 ದಿನಗಳಿಂದ ಕಾಯುತ್ತಿದ್ದೇನೆ; ಭೇಟಿಗೆ ಅವಕಾಶ ಕೊಡಿ ಎಂದು ಕೋರಿದ್ದರು. ಒಂದೇ ಕಟ್ಟಡದಲ್ಲಿ ಕಚೇರಿ ಹೊಂದಿರುವ ಇಬ್ಬರು ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ ಯಾವ ರೀತಿಯಲ್ಲಿ ಮುಕ್ತಾಯವಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಇಬ್ಬರೂ ಅಧಿಕಾರಿಗಳು ಭೇಟಿಯಾಗಿ ಚರ್ಚೆ ನಡೆಸಿದ್ದರೆ ಹೀಗಾಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ಸಚಿವರ ಮಧ್ಯ ಪ್ರವೇಶ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ ಶೆಟ್ಟರ್ ಅವರ ಸ್ವಂತ ನಗರದಲ್ಲಿ ಅಧಿಕಾರಿಗಳಿಬ್ಬರ ಶೀತಲ ಸಮರ ನಡೆದಿರುವುದರಿಂದ ಶೀಘ್ರದಲ್ಲಿ ಕ್ರಮವಾಗುವ ನಿರೀಕ್ಷೆ ಇದೆ. ಇಬ್ಬರೂ ವರ್ಗಾವಣೆಯಾಗುವ ಸಾಧ್ಯತೆ ಇದೆ.
ಕೃಷ್ಣಕಾಂತಗೆ ಮೆಮೊ: ಅ. 4ರಂದು ಆಯುಕ್ತ ಆರ್. ದಿಲೀಪ ಅವರು ಡಿಸಿಪಿ ಕೃಷ್ಣಕಾಂತ ಅವರಿಗೆ ಮೆಮೊ ಕಳುಹಿಸಿದ್ದಾರೆ. ಅ. 2ರಂದು ನೀವು ನನ್ನ ಮನೆಯ ದೂರವಾಣಿಗೆ ಕರೆ ಮಾಡಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದೀರಿ. ಆ ಬಗ್ಗೆ ತಕ್ಷಣವೇ ಲಿಖಿತ ವರದಿ ನೀಡುವಂತೆ ಸೂಚಿಸಿದ್ದೆ. ಆದರೆ, ನಂತರ ನೀವು ಯೂ ಟರ್ನ್ ಹೊಡೆದಿರಿ. ಇದು ನಿಮ್ಮ ವಿಶ್ವಾಸಾರ್ಹತೆ ಕುರಿತು ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಮೆಮೊದಲ್ಲಿ ವಿವರಿಸಿದ್ದಾರೆ. ಇದಕ್ಕೆ ಡಿಸಿಪಿ 2 ಪುಟಗಳ ಉತ್ತರ ನೀಡಿರುವುದಾಗಿ ತಿಳಿದುಬಂದಿದೆ. ಇಬ್ಬರು ಅಧಿಕಾರಿಗಳ ವೈಮನಸ್ಸಿನ ಮಧ್ಯೆ ಇನ್ನೊಬ್ಬ ಅಧಿಕಾರಿಯ ಭ್ರಷ್ಟಾಚಾರದ ವಿಷಯವೂ ಪ್ರಸ್ತಾಪವಾಗಿದ್ದು, ಸರ್ಕಾರ ಒಟ್ಟಾರೆ ವಿದ್ಯಮಾನವನ್ನು ತನಿಖೆಗೆ ಒಳಪಡಿಸಲಿದೆಯೇ ಎಂಬ ಪ್ರಶ್ನೆ ಮೂಡಿದೆ.