

ಚಾಮರಾಜನಗರ: ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟು ಪಡೆಯಿತು ಎಂಬ ನಟ ಕಮಲ್‌ಹಾಸನ್ ಹೇಳಿಕೆಯನ್ನು ಖಂಡಿಸಿ ಕನ್ನಡಪರ ಸಂಘಟನೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ನಟ ಕಮಲ್‌ಹಾಸನ್ ವಿರುದ್ಧ ೋಷಣೆ ಕೂಗಿದರು. ಕಮಲ್ ಹಾಸನ್ ಭಾವಚಿತ್ರಕ್ಕೆ ಟೊಮ್ಯಾಟೊದಲ್ಲಿ ಹೊಡೆಯುವ ಮೂಲಕ ಆಕ್ರೋಶ ಹೊರಕಾಕಿದರು.
ಈ ವೇಳೆ ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಸಿನಿಮಾ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟುಪಡೆಯಿತು ಎಂಬ ಕಮಲ್‌ಹಾಸನ್ ಹೇಳಿಕೆ ಅತ್ಯಂತ ಖಂಡನೀಯ. ಕಮಲ್ ಹಾಸನ್ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅರಿವಿಲ್ಲದೇ ಇಂತಹ ಮಾತುಗಳನ್ನಾಡಿದ್ದಾರೆ. ಈ ಮೂಲಕ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕನ್ನಡದ ಕುರಿತು ಅವಹೇಳಕಾರಿಯಾಗಿ ಮಾತನಾಡಿರುವ ನಟ ಕಮಲ್ ಹಾಸನ್ ಸಿನಿಮಾಗಳನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪ್ರದರ್ಶನ ಮಾಡಬಾರದು. ಒಂದು ವೇಳೆ ಅವರ ಚಿತ್ರವನ್ನು ಬಿಡುಗಡೆ ಮಾಡಿದರೆ, ಸಿನಿಮಾ ಮಂದಿರಗಳಿಗೆ ನುಗ್ಗಿ ಪೋಸ್ಟರ್ ಹರಿದುಹಾಕುತ್ತೇವೆ. ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ಕ್ಷಮೆಯಾಚಿಸದೇ ಕಮಲ್ ಹಾಸನ್ ಉದ್ದಟತನ ಪ್ರದರ್ಶನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ನಿಷೇಧ ಮಾಡುವ ಮೂಲಕ ಅವರಿಗೆ ತಕ್ಕುತ್ತರವನ್ನು ನೀಡಬೇಕಿದೆ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ನಿಜಧ್ವನಿ ಗೋವಿಂದರಾಜು, ತಾಂಡವಮೂರ್ತಿ, ರಾಜಪ್ಪ, ಪಣ್ಯದಹುಂಡಿ ರಾಜು, ತಾಂಡವಮೂರ್ತಿ, ವೀರಭದ್ರ, ಗೋವಿಂದರಾಜು, ಮಹೇಶ್‌ಗೌಡ, ಸಿದ್ದರಾಜು, ಬಸವರಾಜು ಹಾಗೂ ಇತರರು ಭಾಗವಹಿಸಿದ್ದರು.