ಕಮಲ್ ಹಾಸನ್  ವಿತಂಡವಾದಿ: ಪ್ರತಾಪ್ ಸಿಂಹ ಕಿಡಿ

pratap simha 3
Published on

ಮೈಸೂರು: ಕಮಲ್ ಹಾಸನ್ ಅವರನ್ನು ವಿತಂಡವಾದಿ ಎಂದು ತಮಿಳುನಾಡಿನಲ್ಲಿ ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕುಟುಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅವರನ್ನು ಕಡೆಗಣಿಸಿದ್ದಾರೆ. ಅವರ ಹೇಳಿಕೆಯನ್ನು ಇಲ್ಲಿನ ಕೆಲವರು ಬೆಂಬಲಿಸುತ್ತಾರೆ. ನಾಚಿಕೆ ಆಗಬೇಕು ಎಂದು ಹರಿಹಾಯ್ದರು.

ಕನ್ನಡ ಕೇವಲ ಭಾಷೆ ಅಲ್ಲ. ಕನ್ನಡ ನಮ್ಮ ಸಂಸ್ಕೃತಿ, ನಮ್ಮ ಸ್ವಂತಿಕೆ, ನಮ್ಮ ಅಸ್ಮಿತೆ. ನಮ್ಮ ನೆಲದ ಭಾಷೆ. ಎಲ್ಲಿಂದಲೋ ಬಂದ ಭಾಷೆ ಅಲ್ಲ. ಸಂಸ್ಕೃತ, ಮರಾಠಿ ಪದಗಳು ಕನ್ನಡದೊಳಗೆ ಸೇರಿಕೊಂಡಿವೆ. ಹಾಗಂತ ಇದು ಯಾವುದು ಭಾಷೆಯಿಂದ ಹುಟ್ಟಿದ ಭಾಷೆ ಅಲ್ಲ. ಕನ್ನಡಕ್ಕೆ ಅಪ್ಪ-ಅಮ್ಮನನ್ನು ಹುಡುಕ ಬೇಡಿ. ಇದು ಮಣ್ಣಿನ ಭಾಷೆ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಸಂಸದ ಯದುವೀರ್ ಅವರನ್ನು ಸಂಸ್ಥಾನವಿಲ್ಲದ ರಾಜರು ಎಂದಿರುವ ಕರವೇ ನಾರಾಯಣ ಗೌಡ ಹೇಳಿಕೆ ಸರಿಯಲ್ಲ. ಯದುವೀರ್ ಟೀಕೆ ಮಾಡಲು ನಾರಾಯಣಗೌಡರಿಗೆ ಅಧಿಕಾರವಿದೆ. ಆದರೆ ಅವರ ವಿಚಾರದಲ್ಲಿ ಮೈಸೂರು ಸಂಸ್ಥಾನವನ್ನು ಎಳೆದು ತರಬೇಡಿ. ಸಂಸದ ಯದುವೀರ್ ಬಗ್ಗೆ ಟೀಕೆ, ವಿಮರ್ಶೆ ಮಾಡಿ. ಆದರೆ ಅದಕ್ಕೆ ಮೈಸೂರು ಸಂಸ್ಥಾನವನ್ನು ಸೇರಿಸಬೇಡಿ ಎಂದು ಹೇಳಿದರು.

ಕನ್ನಡ ಭಾಷೆ, ಸಂಸ್ಕೃತಿಗೆ ಮೈಸೂರು ಸಂಸ್ಥಾನದ ಕೊಡುಗೆ ಬಹಳಷ್ಟಿದೆ. ಈ ಸಂಸ್ಥಾನದ ಋಣದಲ್ಲಿ ನಾವೆಲ್ಲರೂ ಇರಬೇಕು. ಕನ್ನಡ ನಾಡಿನ ಬಗ್ಗೆ ನಾಲ್ವಡಿ ಅವರಿಗೆ ಇದ್ದ ದೂರದೃಷ್ಟಿ ಅಪಾರ. ಯದುವೀರ್ ಹೇಳಿಕೆ ಟೀಕಿಸಲು ಮೈಸೂರು ಸಂಸ್ಥಾನವನ್ನು ಬಳಸಬೇಡಿ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಹಿಂದುಗಳಲ್ಲಿ ಅಭದ್ರತೆ, ಆತಂಕ ಇದೆ. ಅರುಣ್ ಪುತ್ತಿಲ್, ಕಲ್ಲಡ್ಕ್ ಪ್ರಭಾಕರ್‌ಗೆ ನೋಟಿಸ್ ನೀಡಿರುವುದು ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆ. ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದರೆ ಈ ಹತ್ಯೆಗಳು ಆಗುತ್ತಿರಲಿಲ್ಲ. ಪಿಎಫ್‌ಐ, ಕೆಎಫ್‌ಡಿ ಮಟ್ಟ ಹಾಕುವುದನ್ನು ಬಿಟ್ಟು ಹಿಂದು ನಾಯಕರಿಗೆ ನೋಟಿಸ್ ಕೊಟ್ಟಿರುವುದು ಎಷ್ಟು ಸರಿ? ಹಿಂದುಗಳು ಧ್ವನಿ ಅಡಗಿಸಲು ಮಾಡಿರುವ ಕೆಲಸ ಇದು ಎಂದು ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net