

ಮದ್ದೂರು: ತಮಿಳು ಚಿತ್ರನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತಮಿಳು ಭಾಷೆಯಿಂದ ಕನ್ನಡ ಹುಟ್ಟಿತು ಎಂಬ ಅವಿವೇಕಿ ಹೇಳಿಕೆ ನೀಡಿ ರಾಜ್ಯಾದ್ಯಂತ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದರೂ ಕ್ಷಮೆಯಾಚಿಸದೆ ಉದ್ಧಟತನ ತೋರಿ ದುರಹಂಕಾರದ ವರ್ತನೆ ತೋರುತ್ತಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಟಿಬಿ ವೃತ್ತದ ಬಳಿಯ ಬೆಂಗಳೂರು ಮೈಸೂರು ಹೆದ್ದಾರಿಗೆ ಆಗಮಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಕಮಲ್‌ಹಾಸನ್ ಅವರ ಪ್ರತಿಕೃತಿದಹಿಸಿ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ತಡೆದ ಹಿನ್ನೆಲೆಯಲ್ಲಿ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನೆ ನೇತೃತ್ವವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ತಮಿಳು ಚಿತ್ರನಟ ಕಮಲ್‌ಹಾಸಸ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆಯನ್ನು ಖಂಡಿಸಿ ಹಲವಾರು ಮಂದಿ ಕ್ಷಮೆ ಕೇಳುವಂತೆ ಪ್ರತಿಭಟನೆ ಮಾಡಿದ್ದರು ಕ್ಷಮೆ ಕೇಳದೆ ಉಡಾಫೆ ತೋರುತ್ತಿರುವ ಕ್ರಮ ಸರಿಯಲ್ಲ ಎಂದು ಕಮಲ್‌ಹಾಸನ್ ಅವರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಮುಂದಾದರೂ ಕ್ಷಮೆ ಕೇಳದೆ ಹೋದರೆ ಕಮಲ್ ಹಾಸನ್ ಅವರ ಚಿತ್ರಗಳನ್ನು ರಾಜ್ಯದಾದ್ಯಂತ ನಿಷೇಧಕ್ಕೆ ಒತ್ತಾಯಿಸಲಾಗುವುದು ಹಾಗೂ ಅವರು ರಾಜ್ಯಕ್ಕೆ ಬಂದರೆ ಮುಖಕ್ಕೆ ಮಸಿ ಬಳಿದು ಕಳುಹಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಭಾಷೆಗೆ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. 8 ಜ್ಞಾನ ಪೀಠ ಪ್ರಶಸ್ತಿಗಳು ಬಂದಿವೆ. ಅತ್ಯಂತ ಪ್ರಾಚೀನವಾದ ಕನ್ನಡ ಭಾಷೆಯ ಬಗ್ಗೆ ತಮಿಳುಭಾಷೆಯನ್ನು ಓಲೈಸುವ ಭರದಲ್ಲಿ ಕನ್ನಡ ಭಾಷೆಯ ಬಗ್ಗೆ ಲಘು ಮಾತನಾಡಿರುವುದು ಸರಿಯಲ್ಲ. ಉದ್ಧಟತನ ಬಿಟ್ಟು ಈ ಕೂಡಲೇ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ತೈಲೂರು ಆನಂದಾಚಾರಿ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಅವರು ಲಘುವಾಗಿ ಮಾತನಾಡಿದ್ದರೂ ಕನ್ನಡ ಚಿತ್ರರಂಗ ಬಹುತೇಕ ಚಿತ್ರನಟರು ಈ ಬಗ್ಗೆ ಸುಮ್ಮನಿರುವುದು ಸರಿಯಲ್ಲ ಎಂದರು.
ಪಟ್ಟಣದ ಸಂಜಯ ಚಿತ್ರಮಂದಿರದಿಂದ ಟಿಬಿ ವೃತ್ತದವರೆಗೆ ಪ್ರತಿಭಟನೆ ನಡೆಸಿ ತಮಿಳು ಚಿತ್ರ ನಟ ಕಮಲ್‌ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೆದ್ದಾರಿಗೆ ಆಗಮಿಸಿದರು.
ಕಸ್ತೂರು ಕರ್ನಾಟಕ ಜನಪರ ವೇದಿಕೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಸಿಂಹ ಶ್ರೀನಿವಾಸ್, ಮುಖಂಡರಾದ ಸೊ.ಶಿ.ಪ್ರಕಾಶ್, ಉಮೇಶ್, ನವೀನ್‌ಕುಮಾರ್, ಸುನೀಲ್, ಅಪೂರ್ವಚಂದ್ರ, ಪ್ರಭುಲಿಂಗು, ಮಹಲಿಂಗು, ಸೆಲ್ವಿ ಮುರಗೇಶ್, ರಮೇಶ್, ಮಧು, ಮಹೇಂದ್ರ, ಜ್ಯೋತಿನಾಗಣ್ಣ, ಸುಜಾತಾ ಇತರರು ಇದ್ದರು.