

ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಟನೆ ನಗರದ ಕಮಲಾಪುರ ಹೊರವಲಯದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮೊಹ್ಮದ್ ಕುಡಚಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಗಣೇಶ ಕಮ್ಮಾರ ಕೊಲೆಯಾದವರು.
ಮೊಹ್ಮದ್ ಕುಡಚಿ ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳ ಗುಂಪು ಮಾರಕಾಸಗಳಿಂದ ದಾಳಿ ಮಾಡಿದೆ. ತೀವ್ರ ಗಾಯಗೊಂಡ ಕುಡಚಿ ಮನೆಯಲ್ಲೇ ಮೃತಪಟ್ಟಿದ್ದಾನೆ. ಕುಡಚಿ ಮನೆಯ ಅಣತಿ ದೂರದಲ್ಲಿ ಯುವಕನೊಬ್ಬನ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನನ್ನು ಗಣೇಶ ಕಮ್ಮಾರ ಎಂದು ಗುರುತಿಸಲಾಗಿದೆ. ಹಂತಕರೊಂದಿಗೆ ಬಂದಿದ್ದ ಗಣೇಶಗೆ ಮಾರಕಾಸಗಳ ಏಟು ತಗುಲಿದ್ದರಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಕೂಡಲೇ ಬಂಧಿಸಿ ಕೊಲೆಯ ನಿಖರ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಆಯುಕ್ತ ಗುಪ್ತಾ ತಿಳಿಸಿದ್ದಾರೆ.
ಫ್ರೂಟ್ ಇರ್ಫಾನ್ ಗ್ಯಾಂಗ್ ಕೈವಾಡ ಶಂಕೆ:
ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರೌಡಿಶೀಟರ್ ಫ್ರೂಟ್ ಇರ್ಫಾನ್‌ನನ್ನು (ರ್ಇಾನ್ ಹಂಚಿನಾಳ) ಹಾಡಹಗಲೇ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಇರ್ಫಾನ್ ಜೊತೆ ಕೊಲೆಯಾದ ಮೊಹ್ಮದ್ ಕುಡಚಿ ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದ. ಇರ್ಫಾನ್ ಕೊಲೆಯಾದ ನಂತರ ಆತನ ಮಗ ಅರ್ಬಾಜ್‌ಗೂ ಕುಡಚಿಗೂ ಹಣಕಾಸಿನ ವಿಚಾರವಾಗಿ ವೈಷಮ್ಯ ಬೆಳೆದಿತ್ತು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ನಾಲ್ವರ ವಶ: ಕೊಲೆ ಪ್ರಕರಣ ಭೇದಿಸಲು ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.